ನವದೆಹಲಿ: 10 ವರ್ಷದ ಬಾಲಕಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡು ಆಕೆಗೆ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಇಂಡಿಗೋ ಪೈಲಟ್ ಮತ್ತು ಆಕೆಯ ಪತಿ, ಏರ್‌ಲೈನ್ ಸಿಬ್ಬಂದಿಗೆ ಗುಂಪೊಂದು ಥಳಿಸಿದ ಘಟನೆ ದೆಹಲಿಯ ದ್ವಾರಕಾ ನಗರದಲ್ಲಿ ನಡೆದಿದೆ. ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಪೈಲಟ್ ಅನ್ನು ವಿಮಾನಯಾನ ಸಂಸ್ಥೆಯು ಮಹಿಳೆಯನ್ನು ಸದ್ಯ ಹುದ್ದೆಯಿಂದ ತಾತ್ಕಾಲಿಕವಾಗಿ ತಡೆಹಿಡಿದಿದೆ. ಜೊತೆಗೆ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.
ಮಾಹಿತಿ ಪ್ರಕಾರ, ಪತಿ ಮತ್ತು ಪತ್ನಿ ಇಬ್ಬರೂ ವಿಮಾನಯಾನ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆ ಇಂಡಿಗೋ ಏರ್‌ಲೈನ್ಸ್‌ನಲ್ಲಿ ಪೈಲಟ್ ಆಗಿದ್ದು, ಪತಿ ವಿಸ್ತಾರಾ ಏರ್ಲೈನ್ನಲ್ಲಿ ಸಿಬ್ಬಂದಿಯಾಗಿದ್ದಾನೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪೈಲಟ್ ಸಮವಸ್ತ್ರದಲ್ಲಿರುವ ಮಹಿಳೆಗೆ ಜನರು ಪದೇ ಪದೇ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ಆಕೆ ಸಹಾಯಕ್ಕಾಗಿ ಅಳುತ್ತಿದ್ದರೂ ಹಲವಾರು ಮಹಿಳೆಯರು ಹೊಡೆಯುತ್ತಲೇ ಇದ್ದಾರೆ.
ಆಕೆಯ ಪತಿಗೆ ಪುರುಷರ ಗುಂಪೊಂದು ಪ್ರತ್ಯೇಕವಾಗಿ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಗುಂಪು ಹಲ್ಲೆಯನ್ನು ತಡೆಯಲು ಕೆಲವರು ಮಧ್ಯಪ್ರವೇಶಿಸುತ್ತಿದ್ದಂತೆ ಆತ ತನ್ನ ಹೆಂಡತಿಯ ರಕ್ಷಣೆಗೆ ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ. ವರದಿಗಳ ಪ್ರಕಾರ, ದಂಪತಿ ಸುಮಾರು ಎರಡು ತಿಂಗಳ ಹಿಂದೆ 10 ವರ್ಷದ ಬಾಲಕಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡಿದ್ದರು. ಇಂದು ಬಾಲಕಿಯ ಸಂಬಂಧಿಯೊಬ್ಬರು ಆಕೆಯ ತೋಳುಗಳಲ್ಲಿ ಗಾಯದ ಗುರುತುಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಳ್ಳತನದ ಶಂಕೆಯಲ್ಲಿ ಬಾಲಕಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.