ಬೆಂಗಳೂರು : 2023ರ ವಿಧಾನ ಸಭಾ ಚುನಾವಣೆಗಾಗಿ ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಒಟ್ಟು 28 ವಿಧಾನ ಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 389 ಅಭ್ಯರ್ಥಿಗಳ ಪೈಕಿ 92 (ಶೇ 24) ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಕರ್ನಾಟಕ ಎಲೆಕ್ಷನ್ ವಾಚ್, ಬೆಂಗಳೂರು ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ. 28 ವಿಧಾನ ಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳು ಸ್ವತಃ ಘೋಷಿಸಿಕೊಂಡ ಅಫಿಡವಿಟ್ನಲ್ಲಿನ ಮಾಹಿತಿ ಆಧರಿಸಿ ಈ ಸಂಸ್ಥೆಗಳು ವರದಿಯನ್ನು ತಯಾರಿಸಿವೆ. ವರದಿಯಲ್ಲಿ ತಿಳಿಸಲಾಗಿರುವ ಇನ್ನೂ ಕೆಲ ಮಹತ್ವದ ಅಂಶಗಳು ಇಲ್ಲಿವೆ.
ಅಭ್ಯರ್ಥಿಗಳ ಸಂಖ್ಯೆ ಮತ್ತು ಅಧ್ಯಯನದಲ್ಲಿ ಪರಿಗಣಿಸಲಾದ ಸಂಖ್ಯೆ: ಬೆಂಗಳೂರು ವಲಯದ 28 ವಿಧಾನ ಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ 389 ಅಭ್ಯರ್ಥಿಗಳಿದ್ದು, ಇದರಲ್ಲಿ 384 ಜನರ ಅಫಿಡವಿಟ್ಗಳನ್ನು ಪರಿಶೀಲನೆ ಮಾಡಲಾಗಿದೆ.
ಕ್ರಿಮಿನಲ್ ಮೊಕದ್ದಮೆ ಹೊಂದಿರುವ ಅಭ್ಯರ್ಥಿಗಳ ಸಂಖ್ಯೆ: ಪರಿಶೀಲನೆ ಮಾಡಲಾದ 384 ಅಭ್ಯರ್ಥಿಗಳ ಪೈಕಿ 92 ಅಂದರೆ ಶೇ 24 ರಷ್ಟು ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಅಫಿಡವಿಟ್ನಲ್ಲಿ ಘೋಷಿಸಿಕೊಂಡಿದ್ದಾರೆ.
ಗಂಭೀರ ಸ್ವರೂಪದ ಕ್ರಿಮಿನಲ್ ಮೊಕದ್ದಮೆ ಹೊಂದಿರುವವರ ಸಂಖ್ಯೆ : 57 ಅಭ್ಯರ್ಥಿಗಳು (ಶೇ 15) ತಮ್ಮ ವಿರುದ್ಧ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಘೋಷಿಸಿಕೊಂಡಿದ್ದಾರೆ.
ಕ್ರಿಮಿನಲ್ ಮೊಕದ್ದಮೆ ಹೊಂದಿರುವ ಅಭ್ಯರ್ಥಿಗಳ ಸಂಖ್ಯೆ - ಪಕ್ಷವಾರು: ಪ್ರಮುಖ ಪಕ್ಷಗಳ ಪೈಕಿ, ಬಿಜೆಪಿಯಿಂದ 28 ಅಭ್ಯರ್ಥಿಗಳಲ್ಲಿ 14 (50%), INC ಯಿಂದ 27 ಅಭ್ಯರ್ಥಿಗಳಲ್ಲಿ 19 (70%), ಜೆಡಿಎಸ್ನ 24 ಅಭ್ಯರ್ಥಿಗಳ ಪೈಕಿ 9 (38%) ಮತ್ತು ಆಪ್ನ 28 ಅಭ್ಯರ್ಥಿಗಳ ಪೈಕಿ 9 (ಶೇ 32) ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ.