ಬೆಳಗಾವಿ: ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಗೋಕಾಕ್ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಎರಡನೇ ಪಟ್ಟಿಯಲ್ಲಿ ಅಚ್ಚರಿಯ ಅಭ್ಯರ್ಥಿ ಘೋಷಣೆ ಮಾಡಿದ್ದು, ಪಂಚಮಸಾಲಿ ಸಮುದಾಯದ ಡಾ.ಮಹಾಂತೇಶ ಕಡಾಡಿ ಅವರಿಗೆ ಈ ಬಾರಿ ಕೈ ಪಕ್ಷ ಮಣೆ ಹಾಕಿದೆ. ಈ ಮೂಲಕ ಹಾಲಿ ಶಾಸಕ ರಮೇಶ್ ಜಾರಕಿಹೊಳಿ ಮಣಿಸಲು ಕಾಂಗ್ರೆಸ್ ಈ ಬಾರಿ ಲಿಂಗಾಯತ ಪಂಚಮಸಾಲಿ ಅಸ್ತ್ರ ಪ್ರಯೋಗಿಸಿದೆ. ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಸಂಬಂಧಿ ಡಾ. ಮಹಾಂತೇಶ ಅವರಿಗೆ ಟಿಕೆಟ್ ಘೋಷಿಸಿದ್ದು ತೀವ್ರ ಕುತೂಹಲ ಮೂಡಿಸಿದೆ. ಮಹಾಂತೇಶ ವೃತ್ತಿಯಲ್ಲಿ ಚಿಕ್ಕ ಮಕ್ಕಳ ವೈದ್ಯರಾಗಿದ್ದು, ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಪಂಚಮಸಾಲಿ ಹೋರಾಟದ ಎಫೆಕ್ಟ್:ಗೋಕಾಕ್ ಕ್ಷೇತ್ರದಲ್ಲಿ 1957 ಮತ್ತು 1962ರ ವಿಧಾನಸಭೆ ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯದ ನಿಂಗಪ್ಪ ಅಪ್ಪಯ್ಯ ಕರಲಿಂಗನವರ ಶಾಸಕರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ 1967ರಿಂದ 2008ರ ವರೆಗೆ ಗೋಕಾಕ್ ಮೀಸಲು ಕ್ಷೇತ್ರವಾಗಿತ್ತು. 1999, 2004, 2008, 2013, 2018ರ ಸಾರ್ವತ್ರಿಕ ಚುನಾವಣೆ ಮತ್ತು 2019ರ ಉಪಚುನಾವಣೆಯಲ್ಲಿ ಸತತವಾಗಿ ರಮೇಶ್ ಜಾರಕಿಹೊಳಿ ಗೆಲ್ಲುವ ಮೂಲಕ ತಮ್ಮ ಪಾರುಪತ್ಯ ಮುಂದುವರಿಸಿದ್ದರು.
ಕ್ಷೇತ್ರ ಸಾಮಾನ್ಯವಾದ ಬಳಿಕವೂ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಪಂಚಮಸಾಲಿ ಸಮುದಾಯಕ್ಕೆ ಈವರೆಗೂ ಪ್ರಾಧಾನ್ಯತೆ ಸಿಕ್ಕಿರಲಿಲ್ಲ. ಆದರೆ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆದಿದ್ದರಿಂದ ಸಮುದಾಯದ ಜನ ಜಾಗೃತಿಗೊಂಡಿದ್ದು, ರಾಜಕೀಯ ಅಸ್ತಿತ್ವಕ್ಕಾಗಿ ಕಾದು ಕುಳಿತಿದ್ದರು. ಇದನ್ನೆ ಸರಿಯಾಗಿ ಬಳಸಿಕೊಂಡಿರುವ ಕಾಂಗ್ರೆಸ್ ನಾಯಕರು ಈ ಬಾರಿ ಪಂಚಮಸಾಲಿ ಸಮುದಾಯದ ಡಾ. ಮಹಾಂತೇಶ ಕಡಾಡಿ ಅವರಿಗೆ ಟಿಕೆಟ್ ಘೋಷಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಎಂದು ಕಾದು ನೋಡಬೇಕಿದೆ.