ವಿಜಯಪುರ: ಇಂಡಿ ಮತಕ್ಷೇತ್ರದಲ್ಲಿ ಚುನಾವಣೆ ಜೋರಾಗಿದೆ. ಭೀಮಾತೀರದ ಮತಕ್ಷೇತ್ರ ಎಂದು ಖ್ಯಾತಿ ಪಡೆದಿರುವ ಇಲ್ಲಿ ಕೆಲವೊಮ್ಮೆ ಅತಿವೃಷ್ಟಿ ಇನ್ನೊಮ್ಮೆ ಅನಾವೃಷ್ಠಿ ಸಾಮಾನ್ಯ. ಸದ್ಯ ಈ ಕ್ಷೇತ್ರದಲ್ಲಿ ರಾಜಕೀಯ ರಂಗು ಪಡೆದಿದೆ. ಕಾಂಗ್ರೆಸ್ನಿಂದ ಹಾಲಿ ಶಾಸಕ ಯಶವಂತರಾಯಗೌಡ ಪಾಟೀಲ್ಗೆ ಟಿಕೆಟ್ ನೀಡಿದರೆ, ಬಿಜೆಪಿಯಿಂದ ಕಾಸುಗೌಡ ಬಿರಾದಾರ್ ಅವರಿಗೆ ಟಿಕೆಟ್ ನೀಡಲಾಗಿದೆ. ಜೆಡಿಎಸ್ ಪಕ್ಷ ಬಿ.ಡಿ. ಪಾಟೀಲ್ ಅವರನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದೆ. ಹಾಗಾಗಿ ಕ್ಷೇತ್ರದ ಕಾತುರತೆ ಏರ ತೋಡಗಿದೆ.
ಇಂಡಿ ಮತಕ್ಷೇತ್ರದಲ್ಲಿ ಪೈಪೋಟಿ: ಯಶವಂತರಾಯಗೌಡ ಪಾಟೀಲ್ಗೆ ಈ ಬಾರಿ ಗೆಲುವು ಪ್ರತಿಷ್ಠೆಯಾಗಿದೆ. ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ್ ಕೂಡ ಅಧಿಕಾರಕ್ಕೆ ಬರುವ ಉತ್ಸಾಹದಲ್ಲಿದ್ದಾರೆ. ಇದರ ನಡುವೆ ಕಳೆದ ಬಾರಿ ಅತೀ ಕಡಿಮೆ ಮತದಿಂದ ಸೋತಿರುವ ಜೆಡಿಎಸ್ ಅಭ್ಯರ್ಥಿ ಬಿ.ಡಿ. ಪಾಟೀಲ್ ಕೂಡ, ಈ ಬಾರಿ ತಮ್ಮನ್ನು ಮತದಾರ ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂಬ ವಿಶ್ವಾಸದಲ್ಲಿದ್ದಾರೆ. ಆಪ್ನಿಂದ ಗೋಪಾಲ್ ಆರ್ ಪಾಟೀಲ್ ಎಂಬುವರು ಕಣಕ್ಕಿಳಿಯುತ್ತಿದ್ದು, ಕ್ಷೇತ್ರದ ಮತದಾರರ ಯಾರಿಗೆ ವಿಜಯದ ಮಾಲೆ ಹಾಕಲಿದ್ದಾನೆ ಅನ್ನೋದನ್ನು ಕಾದು ನೋಡಬೇಕಿದೆ ಎನ್ನುತ್ತಿದ್ದಾರೆ ಸ್ಥಳೀಯ ರಾಜಕೀಯ ಚಿಂತಕರು.
ಮತಕ್ಷೇತ್ರದ ವೈಶಿಷ್ಟ್ಯ:ಇಂಡಿ ಮತಕ್ಷೇತ್ರ ವಿವಿಧ ಕಾರಣಗಳಿಂದ ಪ್ರಾಮುಖ್ಯತೆ ಪಡೆದುಕೊಂಡ ಕ್ಷೇತ್ರ. ರಾಜಕೀಯವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಹೆಚ್ಚು ಕಡಿಮೆ ಸಮಬಲ ಪ್ರಾಬಲ್ಯ ಹೊಂದಿದ್ದರಿಂದ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಯಶವಂತರಾಯಗೌಡ ಪಾಟೀಲ್ ಕಳೆದ 10 ವರ್ಷಗಳಿಂದ ಕ್ಷೇತ್ರದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಮಿನಿ ವಿಧಾನಸೌಧ ನಿರ್ಮಾಣ, ಮೆಗಾ ಮಾರುಕಟ್ಟೆ, ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ, ಭೀಮಾ ಶಂಕರ ಸಕ್ಕರೆ ಕಾರ್ಖಾನೆ ಆರಂಭ, ರೋಡಗಿ - ಉಡಚಾಣ ಬ್ರಿಡ್ಜ್ ನಿರ್ಮಾಣ, ಶಾಶ್ವತ ಕುಡಿವ ನೀರಿನ ಯೋಜನೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳಾಗಿದ್ದರೂ ಕೆಲವು ವಿಚಾರವಾಗಿ ಅಪಸ್ವರ ಕೇಳಿ ಬರುತ್ತಿವೆ.
ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಇಂಡಿ ಧೂಳಾಪುರವಾಗಿ ಮಾರ್ಪಟ್ಟಿದೆ. ಮತ ಕ್ಷೇತ್ರದ ಹಲವು ಹಳ್ಳಿಗಳಿಗೆ ಸರಿಯಾದ ರಸ್ತೆಗಳಿಲ್ಲ. ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಇನ್ನೂ ಕೆಲವೊಮ್ಮೆ ಭೀಮಾನದಿಯ ಪ್ರವಾಹಕ್ಕೆ ಜನರು ತುತ್ತಾಗುತ್ತಾರೆ. ಅವರಿಗೆ ಶಾಶ್ವತ ಪರಿಹಾರಬೇಕು ಎಂಬುದು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಈ ಬೇಡಿಕೆಗಳನ್ನೇ ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿ ಈ ಬಾರಿ ಮತಬೇಟೆ ಆರಂಭಿಸಿವೆ.