ಬೆಂಗಳೂರು: ನಾನು ಕೋಲಾರ ಹಾಗೂ ವರುಣಾ ಎರಡೂ ಕ್ಷೇತ್ರದಿಂದ ಟಿಕೆಟ್ ಕೇಳಿದ್ದೇನೆ. ಹೈಕಮಾಂಡ್ ಹೇಳಿದ್ರೆ ಎರಡೂ ಕಡೆ ಕಣಕ್ಕಿಳಿಯುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂದು ಕಾಂಗ್ರೆಸ್ನ ಮೊದಲ ಪಟ್ಟಿ ಬಿಡುಗಡೆ ಆಗಿದೆ. ವಿವಾದ ಇಲ್ಲದ ಕ್ಷೇತ್ರಗಳ ಪಟ್ಟಿ ಅಂತಿಮ ಮಾಡಿದೆ. ನಾನು ಎರಡು ಕ್ಷೇತ್ರಗಳಲ್ಲೂ ನಿಲ್ತೀನಿ. ಕೋಲಾರ ಮತ್ತು ವರುಣ ಎರಡು ಕ್ಷೇತ್ರಗಳನ್ನು ಕೇಳಿದ್ದೇನೆ. ಹೈಕಮಾಂಡ್ ಹೇಳಿದ್ರೆ ಎರಡು ಕಡೆ ನಿಲ್ತೀನಿ. ಸ್ಕ್ರೀನಿಂಗ್ ಹಾಗೂ ಸಿಇಸಿ ಸಭೆಯಲ್ಲಿ ಚರ್ಚೆ ಆಗಿತ್ತು. ಹೈಕಮಾಂಡ್ ವರುಣಾದಲ್ಲಿ ನಿಲ್ಲಿ ಅಂದಿದ್ದಾರೆ. ನಾನು ಕೋಲಾರ ಕೂಡ ಕೇಳಿದ್ದೇನೆ. ಆದ್ರೆ ಹೈಕಮಾಂಡ್ ನಿರ್ಧಾರ ಅಂತಿಮ ಎಂದು ಹೇಳಿದರು.
ರಾಹುಲ್ ಗಾಂಧಿ ಸದಸ್ಯತ್ವ ಅನರ್ಹ ವಿಚಾರ ಮಾತನಾಡಿ, ಇದು ಪ್ರಜಾಪ್ರಭುತ್ವದ ಕರಾಳ ದಿನ. ಬಿಜೆಪಿ ರಾಹುಲ್ ಗಾಂಧಿಯವರಿಗೆ ಹೆದರಿಕೊಂಡಿದ್ದಾರೆ. ಕೋರ್ಟ್ ಒಂದು ತಿಂಗಳು ಸಮಯ ನೀಡಿದೆ. ಆದ್ರೂ ತರಾತುರಿಯಲ್ಲಿ ಈ ನಿರ್ಧಾರ ಮಾಡಲಾಗಿದೆ. ತರಾತುರಿಯಲ್ಲಿ ರಾಹುಲ್ ಅವರನ್ನು ಅನರ್ಹ ಮಾಡಿದ್ದಾರೆ. ಭಾರತದಲ್ಲಿ ಇಂತಹ ಬೆಳವಣಿಗೆ ಆಗಿರಲಿಲ್ಲ. ಭಾರತ್ ಜೋಡೊ ಯಶಸ್ಸು ಬಿಜೆಪಿಗೆ ತಡೆಯಲಾಗಲಿಲ್ಲ. ಈ ಅನರ್ಹತೆಯಿಂದ ರಾಹುಲ್ ಮತ್ತಷ್ಟು ಜನಪ್ರಿಯರಾಗುತ್ತಾರೆ. ಬಿಜೆಪಿಗೆ ಲಾಭ ಆಗುತ್ತದೆ ಅಂದ್ರೆ ತಪ್ಪು ನಿರ್ಧಾರ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಆರು ಜನ ಹಾಲಿ ಶಾಸಕರ ಟಿಕೆಟ್ ಬಿಡುಗಡೆ ಆಗದ ವಿಚಾರ ಕುರಿತು ಮಾತನಾಡಿ, ಆ ಕ್ಷೇತ್ರದಲ್ಲಿ ಹೆಚ್ಚು ಆಕಾಂಕ್ಷಿಗಳು ಇದ್ದಾರೆ. ಹಾಗಾಗಿ ಟಿಕೆಟ್ ಬಿಡುಗಡೆ ಆಗಿಲ್ಲ. ಎರಡನೇ ಪಟ್ಟಿಯಲ್ಲಿ ಬಿಡುಗಡೆ ಆಗುತ್ತದೆ. ಸರ್ವೆ ಮಾನದಂಡ ಒಂದೇ ಅಲ್ಲ. ಕಾರ್ಯಕರ್ತರ ಅಭಿಪ್ರಾಯವೂ ಮುಖ್ಯ ಆಗಿತ್ತು. ಕಾರ್ಯಾಧ್ಯಕ್ಷರು, ಸೆಕ್ರೆಟರಿ ಕೂಡ ವರದಿ ಕೊಟ್ಟಿದ್ದರು. ಜಿಲ್ಲಾ ಅಧ್ಯಕ್ಷ, ಬ್ಲಾಕ್ ಅಧ್ಯಕ್ಷ ಇವರ ಅಭಿಪ್ರಾಯ ಪಡೆದಿದ್ದೆವು. ಅದರ ಆಧಾರ ಮೇಲೆ ಟಿಕೆಟ್ ಹಂಚಿಕೆ ಮಾಡಿದ್ದೇವೆ ಎಂದು ಹೇಳಿದರು.