ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ವೆಂಕಟೇಶ್ ಹೆಗಡೆ ಹೊಸಬಾಳೆ ಮಾತನಾಡಿದರು. ಉತ್ತರ ಕನ್ನಡ:ನಿನ್ನೆಯಷ್ಟೇ ಭೀಮಣ್ಣ ನಾಯ್ಕ್ ಅವರನ್ನು ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ಗೆ ಭಿನ್ನಮತದ ಬಿಸಿ ಜೋರಾಗಿಯೇ ತಟ್ಟಿದೆ. ಇದೀಗ ಭೀಮಣ್ಣ ನಾಯ್ಕ್ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಾಂಗ್ರೆಸ್ನ ವೆಂಕಟೇಶ್ ಹೆಗಡೆ ಹೊಸಬಾಳೆ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ.
''ಹಲವು ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಭೀಮಣ್ಣ ನಾಯ್ಕ್ ಸೋಲು ಅನುಭವಿಸಿದ್ದರು. ಈ ಬಾರಿ ಕ್ಷೇತ್ರದಲ್ಲಿ ಹಲವು ಆಕಾಂಕ್ಷಿಗಳಿದ್ದು, ಅವರಲ್ಲಿ ಯಾರಿಗಾದರು ಟಿಕೆಟ್ ನೀಡಬಹುದಿತ್ತು. ಆದರೆ, ಈ ಬಾರಿ ಕಾಂಗ್ರೆಸ್ ಮತ್ತೆ ಭೀಮಣ್ಣ ಅವರಿಗೆ ಟಿಕೆಟ್ ನೀಡಿರುವುದು ನನಗೆ ಅಸಮಾಧಾನ ತಂದಿದೆ'' ಎಂದು ವೆಂಕಟೇಶ್ ಹೆಗಡೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವೆಂಕಟೇಶ ಹೆಗಡೆ ಹೊಸಬಾಳೆ ಹೇಳಿದ್ದೇನು?:''ನಾನು ಹಲವಾರು ವರ್ಷದಿಂದ ಕಾಂಗ್ರೆಸ್ನಲ್ಲಿದ್ದು ಕೆಲಸ ಮಾಡಿದ್ದೇನೆ. ಜೊತೆಗೆ ಜನರ ವಿಶ್ವಾಸ ಗಳಿಸಿದ್ದೇನೆ. ಅದಕ್ಕಾಗಿ ನಾನು ಈ ಬಾರಿ ಕಾಂಗ್ರೆಸ್ನಿಂದ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುತ್ತಿದೇನೆ. ಜನರ ಬೆಂಬಲ ನನಗೆ ಇದೆ. 25,000 ಮತಗಳ ಅಂತರದಿಂದ ಗೆಲ್ಲುತ್ತೇನೆ'' ಎಂದು ವೆಂಕಟೇಶ ಹೆಗಡೆ ಹೊಸಬಾಳೆ ವಿಶ್ವಾಸ ವ್ಯಕ್ತಪಡಿಸಿದರು.
ಕಾಗೇರಿ ಸೋಲಿಸುವುದು ಸುಲಭದ ಮಾತಲ್ಲ:ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬ್ರಾಹ್ಮಣ ಮತ್ತು ನಾಮಧಾರಿ ಮತಗಳು ಜಾಸ್ತಿ ಇರುವುದರಿಂದ ಒಂದು ವೇಳೆ ಕಾಂಗ್ರೆಸ್ನಿಂದ ವೆಂಕಟೇಶ್ ಹೆಗಡೆ ಹೊಸಬಾಳೆಗೆ ಟಿಕೆಟ್ ಸಿಕ್ಕಿದ್ದರೆ, ಅವರೂ ಬ್ರಾಹ್ಮಣ ಸಮುದಾಯ ಆಗಿರುವುದರಿಂದ ಬ್ರಾಹ್ಮಣ ಮತಗಳನ್ನು ಸುಲಭವಾಗಿ ಪಡೆಯಬಹುದು ಎಂಬುದು ವೆಂಕಟೇಶ್ ಹೆಗಡೆ ಆಂತರಿಕ ಲೆಕ್ಕಾಚಾರ. ಆದ್ರೆ ಬಿಜೆಪಿಯ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಒಳ್ಳೆಯ ಹಿಡಿತವನ್ನು ಇಟ್ಟುಕೊಂಡಿದ್ದಾರೆ. ಆರು ಬಾರಿ ಸತತವಾಗಿ ಗೆಲುವನ್ನ ಕಂಡಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸೋಲಿಸುವುದು ಸುಲಭದ ಮಾತಲ್ಲ. ಆದ್ರೆ ಇನ್ನೂವರೆಗೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿಲ್ಲ.
ಇದನ್ನೂ ಓದಿ:ಬಸವನಬಾಗೇವಾಡಿ: ಶಿವಾನಂದ ಪಾಟೀಲ್ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕುತ್ತಾ ಬಿಜೆಪಿ-ಜೆಡಿಎಸ್?
ಈ ಬಾರಿಯೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿದೆ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಒಂದು ವೇಳೆ ಭೀಮಣ್ಣ ನಾಯ್ಕ್ ಮತ್ತು ವೆಂಕಟೇಶ್ ಹೆಗಡೆ ಹೊಸಬಾಳೆ ಇಬ್ಬರೂ ಸ್ಪರ್ಧೆ ಮಾಡಿದ್ರೆ ಕಾಂಗ್ರೆಸ್ನ ವೋಟುಗಳು ಒಡೆದು ಹೊಗುವ ಸಾಧ್ಯತೆಯೇ ಹೆಚ್ಚಿದೆ. ಭೀಮಣ್ಣ ನಾಯ್ಕ್ ಮತ್ತು ವೆಂಕಟೇಶ್ ಹೆಗಡೆ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ರೆ ಸ್ಪೀಕರ್ ಕಾಗೇರಿಗೆ ಪ್ರಬಲ ಸ್ಪರ್ಧೆಯನ್ನು ಕೊಡಬಹುದು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ವೆಂಕಟೇಶ್ ಹೆಗಡೆ ಹೊಸಬಾಳೆ ಅವರ ಅಸಮಾಧಾನವನ್ನು ತಣಿಸುವಂತಹ ಕೆಲಸ ಮಾಡುತ್ತಾರಾ ಎನ್ನುವುದು ಕಾದುನೋಡಬೇಕಿದೆ.
ಇದನ್ನೂ ಓದಿ:ಬೆಂಗಳೂರು, ದೆಹಲಿಯಲ್ಲಿ ನನ್ನನ್ನು ಸೋಲಿಸಲು ಪ್ಲಾನ್ ಮಾಡಿದ್ದರು: ಸಿಎಂ ಬೊಮ್ಮಾಯಿ