ಮುಳಬಾಗಿಲು ತಾಲೂಕಿನಲ್ಲಿ ಶಿನಿಗೇನಹಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ಕೋಲಾರ:''ಜೆಡಿಎಸ್ ಎರಡನೇ ಪಟ್ಟಿ ಇಂದು ಸಂಜೆ ಅಥವಾ ನಾಳೆ ಬಿಡುಗಡೆ ಮಾಡುತ್ತೇವೆ. ವರುಣಾ ಅಭ್ಯರ್ಥಿ ಅಭಿಷೇಕ್ ಹಿಂದೆ ಸರಿದಿದ್ದಾರೆ ಅನ್ನೋ ಮಾಹಿತಿ ಇದೆ. ವರುಣಾ ಕ್ಷೇತ್ರದ ಬಗ್ಗೆ ನಂತರ ತೀರ್ಮಾನ ಮಾಡ್ತೇವೆ. ಅಭಿಷೇಕ್ ಒಪ್ಪಿದ್ರೆ ಸ್ಪರ್ಧೆ ಬೇಕಾದ್ರೆ ಮಾಡಲಿ'' ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಶಿನಿಗೇನಹಳ್ಳಿಯಲ್ಲಿ ಜೆಡಿಎಸ್ ಸಮಾವೇಶದಲ್ಲಿ ಭಾಗವಹಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕೆಲ ಗೊಂದಲಗಳಿರುವುದರಿಂದ ಸಾಧ್ಯವಾದ್ರೆ ಬದಲಾಗುತ್ತೆ'' ಎಂದು ವರುಣಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕುರಿತು ಹೇಳಿದರು. ಇನ್ನೂ ನಂಜನಗೂಡು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕುವ ಕುರಿತು ಪ್ರತಿಕೃಯೆ ನೀಡಿದ ಅವರು,'' ನಂಜನಗೂಡು ಸ್ಪರ್ಧೆ ಬಗ್ಗೆ ಅಲ್ಲಿನ ಸ್ಥಳೀಯರು ತೀರ್ಮಾನ ಮಾಡಿದ್ದಾರೆ. ಆ ವಿಚಾರ ಸ್ಥಳೀಯ ಜೆಡಿಎಸ್ನವರ ಹೆಗಲಿನ ಮೇಲಿದೆ'' ಎಂದರು.
ಬಿಜೆಪಿಯವರು ನಂದಿನಿ ಮುಳುಗಿಸುತ್ತಾರೆ- ಹೆಚ್ಡಿಕೆ: ಇನ್ನೂ ಅಮುಲ್ ಹಾಗೂ ನಂದಿನಿ ವಿಚಾರದ ಬಗ್ಗೆ ಮಾತನಾಡಿದ ಅವರು, ''ಬಿಜೆಪಿಯವರಿಗೆ ಅಮುಲ್ ಪರಿಣಾಮದ ಬಗ್ಗೆ ಮಾಹಿತಿ ಇಲ್ಲ, ಬಿಜೆಪಿ ಅವರ ಕಣ್ಣಿಗೆ ಪ್ರಧಾನಿ ಮೋದಿ ಬಿಟ್ಟರೆ ಬೇರೆ ಏನೂ ಕಾಣಲ್ಲ. ಅವರು ಎಚ್ಚರಿಕೆಯಿಂದ ತೀರ್ಮಾನ ತೆಗೆದುಕೊಳ್ಳದೇ ಇದ್ರೆ, ನಂದಿನಿ ಮುಳುಗಿಸುತ್ತಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದರು. ''ಎದುರಾಳಿಗಳು ಆತಂಕ ಪಡುವ ರೀತಿ ಪಂಚರತ್ನ ರಥಯಾತ್ರೆ ನಡೆದಿದೆ. ಮುಳಬಾಗಿಲು ಗಣೇಶನ ಆಶೀರ್ವಾದದಿಂದ ಸಕ್ಸಸ್ ಆಗಿದೆ. ಪಂಚರತ್ನದ ಮೂಲಕ ಜನರ ವಿಶ್ವಾಸ ಗಳಿಸಲು ಯಶಸ್ವಿ ಆಗಿದ್ದೇವೆ'' ಎಂದು ಅವರು, ಹಾಸನ ಗೊಂದಲ ವಿಚಾರ ಸುಗಮವಾಗಿ ಬಗೆಹರಿಯುತ್ತದೆ. ಇನ್ನೇರೆಡು ದಿನಗಳಲ್ಲಿ ಅಂತಿಮ ನಿಲುವ ತಿಳಿಸುವ ಅಭಿಪ್ರಾಯ ವ್ಯಕ್ತಪಡಿಸಿದರು.
ಅದ್ಧೂರಿಯಾಗಿ ನಡೆದ ಪಂಚರತ್ನ ಯಾತ್ರೆ:2023ರ ವಿಧಾನಸಭಾ ಚುನಾವಣೆಯಲ್ಲಿ ಶತಾಯ ಗತಾಯ ಅಧಿಕಾರಕ್ಕೆ ಬರಲೇಬೇಕು ಎಂದು ಜೆಡಿಎಸ್ ಪಣತೊಟ್ಟಿದೆ. ರಾಜ್ಯದ ಮೂಡಣದ ಬಾಗಿಲು ಎಂದು ಕರೆಯಲಾಗುವ ಕೋಲಾರ ಜಿಲ್ಲೆ ಮುಳಬಾಗಿಲಿನಿಂದ ಪಂಚರತ್ನ ಯಾತ್ರೆ ನಡೆಯಿತು.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕುಮಾರಣ್ಣನ್ನನ್ನು ನೋಡಲು ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರು. ತಮ್ಮ ನೆಚ್ಚಿನ ನಾಯಕನಿಗೆ ಅಭಿಮಾನಿಗಳು ಕುರಿ ಹಾಗೂ ಬೆಳ್ಳಿ ಗದೆಯನ್ನು ನೀಡಿದರು. ಈ ಎಲ್ಲಾ ದೃಶ್ಯಗಳು ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಶಿನಗೇನಹಳ್ಳಿ ಗ್ರಾಮದಲ್ಲಿ ಕಂಡು ಬಂದವು. ಈ ಗ್ರಾಮದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ಹಾಗೂ ಬೃಹತ್ ಸೇರ್ಪಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದ ಕುಮಾರಸ್ವಾಮಿ ಮೊದಲು ಮಾಜಿ ಸಚಿವ ದಿವಂಗತ ಆಲಂಗೂರು ಶ್ರೀನಿವಾಸ್ ಅವರ ಸಮಾಧಿಗೆ ತೆರಳಿ ನಮನ ಸಲ್ಲಿಸಿದರು.
ಮುಖಂಡರ ನಡುವಿನ ಭಿನ್ನಾಭಿಪ್ರಾಯ ಸರಿಪಡಿಸಿದ ಹೆಚ್ಡಿಕೆ:ನಂತರ ಆಲಂಗೂರು ಶ್ರೀನಿವಾಸ್ ಅವರ ಮನೆಗೆ ತೆರಳಿ ಆಲಂಗೂರು ಶ್ರೀನಿವಾಸ್ ಅವರ ಸೋದರ ಆಲಂಗೂರು ಶಿವಣ್ಣ ಹಾಗೂ ಸ್ಥಳೀಯ ಮುಖಂಡರ ನಡುವೆ ಇದ್ದ ಕೆಲವೊಂದು ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿದರು. ಬಳಿಕ ಬೃಹತ್ ವೇದಿಕೆಯಲ್ಲಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜಿಲ್ಲಾಪಂಚಾಯ್ತಿ ಮಾಜಿ ಅಧ್ಯಕ್ಷ ಗೀತಾ ಆನಂದರೆಡ್ಡಿ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿ ಸದಸ್ಯರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು,''ಕೋಲಾರ ಜಿಲ್ಲೆಯ ಜನರು ನಮ್ಮ ಪಕ್ಷಕ್ಕೆ ಆರೂ ಕ್ಷೇತ್ರಗಳಲ್ಲಿ ಆಶೀರ್ವಾದ ಮಾಡಿ, ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ ಮನವಿ ಮಾಡಿದರು.
ಕುಮಾರಸ್ವಾಮಿ ಹೆಲಿಕ್ಯಾಪ್ಟರ್ ತಪಾಸಣೆ:ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಂದಿದ್ದ ಹೆಲಿಕ್ಯಾಪ್ಟರ್ನ್ನು ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ತಪಾಸಣೆ ನಡೆಸಿದ ಘಟನೆ ಜರುಗಿತು. ವೇದಿಕೆ ಪಕ್ಕದಲ್ಲೇ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿತ್ತು. ಈವೇಳೆ ಹೆಲಿಕ್ಯಾಪ್ಟರ್ ಲ್ಯಾಂಡ್ ಆದ ನಂತರ ಚುನಾವಣೆ ಪ್ಲೈಯಿಂಗ್ ಸ್ವ್ಕಾಡ್ಗಳು ಬಂದು ಹೆಲಿಕಾಪ್ಟರ್ನಲ್ಲಿ ಏನಾದ್ರು ಇದೆಯಾ ಅನ್ನೋದನ್ನು ಪರಿಶೀಲನೆ ನಡೆಸಿದರು.
ಇದನ್ನೂ ಓದಿ:ರಾಮನಗರ ಜಿಲ್ಲೆಯವರೇ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ: ಡಿ.ಕೆ.ಸುರೇಶ್