ನವದೆಹಲಿ: ದೇಶದಲ್ಲಿನ ತ್ವರಿತ ಡಿಜಿಟಲ್ ರೂಪಾಂತರ ಮತ್ತು ಹೊಸ ಅವಕಾಶಗಳ ಮಧ್ಯೆ ಕನಿಷ್ಠ ಎಂಟು ದೊಡ್ಡ ಹೂಡಿಕೆ ಸಂಸ್ಥೆಗಳು ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿವೆ ಎಂದು ಕೇಂದ್ರ ಸಂವಹನ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಹೇಳಿದ್ದಾರೆ.
"ಕನಿಷ್ಠ ಎಂಟು ದೊಡ್ಡ ಹೂಡಿಕೆ ಸಂಸ್ಥೆಗಳು ಇಲ್ಲಿಯವರೆಗೆ ನನ್ನನ್ನು ಭೇಟಿ ಮಾಡಿವೆ ಮತ್ತು ಅವರು ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದಾರೆ. ದೇಶದ ಮಾರುಕಟ್ಟೆ ಗಾತ್ರ ತುಂಬಾ ದೊಡ್ಡದಾಗಿರುವುದರಿಂದ ತಂತ್ರಜ್ಞಾನದ ಬಳಕೆಯೂ ತುಂಬಾ ಹೆಚ್ಚಾಗಿದೆ. ಭಾರತದ ಟೆಲಿಕಾಂ ಮಾರುಕಟ್ಟೆ ಅಷ್ಟೊಂದು ವಿಶಾಲವಾಗಿದೆ" ಎಂದು ಸಚಿವರು ಹೇಳಿದರು.
"ಟೆಲಿಕಾಂ ಕ್ಷೇತ್ರವು ಡಿಜಿಟಲ್ ಇಂಡಿಯಾದ ಹೆಬ್ಬಾಗಿಲಾಗಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಭಾರತದಲ್ಲಿ ಹೂಡಿಕೆ ಮಾಡಲು ಹೂಡಿಕೆ ಕಂಪನಿಗಳು ಸಾಕಷ್ಟು ಆಸಕ್ತಿ ಹೊಂದಿವೆ" ಎಂದು ಅವರು ಹೇಳಿದರು.
2 ಜಿ ಹಗರಣ ಮತ್ತು ನೀತಿ ವೈಫಲ್ಯದಿಂದಾಗಿ ಅಮೂಲ್ಯ ದಶಕವೊಂದನ್ನು ಹಾಳು ಮಾಡಿಕೊಂಡ ಭಾರತದ ಟೆಲಿಕಾಂ ವಲಯವು 2014 ರ ನಂತರ ಮತ್ತೆ ಪುಟಿದೆದ್ದಿತು. ಟೆಲಿಕಾಂ ಮಾರುಕಟ್ಟೆಯಲ್ಲಿನ ಪರಿಸ್ಥಿತಿಯನ್ನು ಸರಿಪಡಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿತು ಮತ್ತು ಈ ವಲಯದಲ್ಲಿ ನೀತಿಯಲ್ಲಿ ಸ್ಪಷ್ಟತೆಯ ಕೊರತೆಯಿಂದ ಉಂಟಾದ ವೈಫಲ್ಯಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಿತು ಎಂದು ಕಳೆದ ತಿಂಗಳು ಕೇಂದ್ರ ಸರ್ಕಾರ ಹೊರಡಿಸಿದ 'ಆರ್ಥಿಕತೆಯ ಶ್ವೇತಪತ್ರ' (White Paper on Economy) ಹೇಳಿದೆ.
ನರೇಂದ್ರ ಮೋದಿ ಸರ್ಕಾರವು ಆರ್ಥಿಕತೆಯನ್ನು ಹೇಗೆ ಮತ್ತೆ ಪುನರುಜ್ಜೀವನಗೊಳಿಸಿತು ಮತ್ತು ದೇಶದ ಚಿತ್ರಣವನ್ನು ಹೇಗೆ ಪುನರ್ನಿರ್ಮಿಸಿತು ಎಂಬುದನ್ನು ಒತ್ತಿಹೇಳಿರುವ ಶ್ವೇತ ಪತ್ರವು, ಸರ್ಕಾರವು ಸ್ಪೆಕ್ಟ್ರಮ್ ಹರಾಜು, ವ್ಯಾಪಾರ ಮತ್ತು ಹಂಚಿಕೆಯ ಪಾರದರ್ಶಕ ವಿಧಾನಗಳನ್ನು ತಂದಿದ್ದು, ಇದು ಸ್ಪೆಕ್ಟ್ರಮ್ ನ ಗರಿಷ್ಠ ಬಳಕೆಯನ್ನು ಮತ್ತಷ್ಟು ಶಕ್ತಗೊಳಿಸಿದೆ ಎಂದು ಹೇಳಿದೆ.
2022 ರಲ್ಲಿ ನಡೆದ 5 ಜಿ ಹರಾಜು ಟೆಲಿಕಾಂ ಸೇವಾ ಪೂರೈಕೆದಾರರಿಗೆ (ಟಿಎಸ್ಪಿ) ಒಟ್ಟಾರೆ ಸ್ಪೆಕ್ಟ್ರಮ್ ಲಭ್ಯತೆಯನ್ನು ಹೆಚ್ಚಿಸಿತು. ಇದು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದ ಸ್ಪೆಕ್ಟ್ರಮ್, ಅಂದರೆ 52 ಗಿಗಾಹರ್ಟ್ಸ್ ಅನ್ನು ಅತ್ಯಧಿಕ ಹರಾಜು ಮೌಲ್ಯದಲ್ಲಿ ಹಂಚಿಕೆ ಮಾಡಿತು. ಅಲ್ಲದೆ, ಟಿಎಸ್ಪಿಗಳಿಗೆ ಆರೋಗ್ಯಕರ ನಗದು ಹರಿವು 5 ಜಿ ತಂತ್ರಜ್ಞಾನದಲ್ಲಿ ಬಂಡವಾಳ ಹೂಡಿಕೆ ಮಾಡಲು ಅನುವು ಮಾಡಿಕೊಟ್ಟಿತು. ಇದು ದೇಶದಲ್ಲಿ 5 ಜಿ ನೆಟ್ವರ್ಕ್ ಅನ್ನು ಆರಂಭಿಸಲು ದಾರಿ ಮಾಡಿಕೊಟ್ಟಿದೆ.
ಇದನ್ನೂ ಓದಿ : ವಿಕಸಿತ್ ಭಾರತ ನಿರ್ಮಾಣಕ್ಕೆ ಬೆಂಗಳೂರು ತೆರಿಗೆದಾರರು ಬಲ ನೀಡುತ್ತಿದ್ದಾರೆ: ಸಚಿವೆ ಸೀತಾರಾಮನ್