ಮೈಸೂರು: ಜಿಲ್ಲೆಯಲ್ಲಿನ ಒಟ್ಟು 105 ಹಳ್ಳಿಗಳಲ್ಲಿ ಮುಂದಿನ 2 ತಿಂಗಳುಗಳಲ್ಲಿ ಕುಡಿಯವ ನೀರಿನ ತೊಂದರೆ ಉಂಟಾಗವ ಸಾಧ್ಯತೆ ಇದೆ ಎಂದು ಜಿಪಂ ಸಿಇಒ ಕೆ.ಎ. ಗಾಯತ್ರಿ ಹೇಳಿದ್ದಾರೆ.
ಜಿಲ್ಲೆಯ ಕುಡಿಯವ ನೀರಿನ ಪರಿಸ್ಧಿತಿಯ ಕುರಿತು ಪಿ.ಡಿ.ಓ ಮತ್ತು ನೀರುಗಂಟಿಗಳೊಂದಿಗೆ ಜಿಲ್ಲಾ ಪಂಚಾಯತ್ ಸಿಇಒ ಜಂಟಿಯಾಗಿ ಸಭೆಯನ್ನು ನಡೆಸಿ ಕುಡಿಯವ ನೀರಿನ ತೊಂದರೆ ಉಂಟಾಗದಂತೆ ಕ್ರಮವಹಿಸಲು ಸೂಚಿಸಿದರು. 7 ಹಳ್ಳಿಗಳಲ್ಲಿ ಖಾಸಗಿ ಕೊಳವೆ ಬಾವಿಗಳ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದ್ದಂತಹ ಕುಡಿಯುವ ನೀರು ಜಲಮೂಲಗಳನ್ನು ಎಫ್ಟಿಕೆ ಮುಖಾಂತರ ಪರೀಕ್ಷೆ ನಡೆಸಿ ವರದಿಗಳನ್ವಯ ಸೂಕ್ತ ಕ್ರಮಕೈಗೊಳ್ಳಲು ತಿಳಿಸಿದರು.
ಕುಡಿಯುವ ನೀರಿನ ಮಾದರಿಗಳಲ್ಲಿ ಆರ್ಸೆನಿಕ್, ಫ್ಲೋರೈಡ್ ಮತ್ತು ನೈಟ್ರೇಟ್ ಅಂಶವು ಕಂಡುಬಂದಲ್ಲಿ ಅಂತಹ ಕೊಳವೆ ಬಾವಿಗಳನ್ನು ಮುಚ್ಚಲು ಮತ್ತು ಕುಡಿಯುವ ನೀರಿಗಾಗಿ ಪರ್ಯಾಯ ಮಾರ್ಗ ಕಂಡುಕೊಂಡು ನೀರು ಸರಬರಾಜು ಮಾಡುವಂತೆ ತಿಳಿಸಿದರು. ಗ್ರಾಮ ಪಂಚಾಯಿತಿಗಳಲ್ಲಿ ಕೊಳವೆ ಬಾವಿಗಳ ಸಮೀಕ್ಷೆಯನ್ನು ಕೈಗೊಂಡು ಕಲುಷಿತಗೊಂಡಿರುವಂತಹ ಬಾವಿಗಳನ್ನು ಮುಚ್ಚುವುದು. ಕಡಿಮೆ ಇಳುವರಿ ಅಥವಾ ಬತ್ತಿ ಹೋದಂತ ಬಾವಿಗಳನ್ನು ಗುರುತಿಸಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ನಿಗದಿಪಡಿಸಲಾಗಿರುವ ದರಗಳನ್ನು ಆಧರಿಸಿ ಟ್ಯಾಂಕರ್ ವಾಟರ್ ಸಪ್ಲೈ ಆಪ್ ಮುಖಾಂತರ ನೀರು ಸರಬರಾಜು ಮಾಡಲು ಸೂಚಿಸಿದರು.
ಅಂತಿಮವಾಗಿ ಅನುಷ್ಠಾನ ಬೆಂಬಲ ಸಂಸ್ಥೆ ಮತ್ತು ಇತರೆ ಇಲಾಖೆ ವತಿಯಿಂದ ಲಭ್ಯವಿರುವ ಎನ್ಜಿಒಗಳನ್ನು ಬಳಸಿಕೊಂಡು ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಕುಡಿಯುವ ನೀರು ಸದ್ಬಳಕೆ ಮಾಡಿಕೊಳ್ಳಬೇಕು. ಜನರಲ್ಲಿ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಸಭೆಯಲ್ಲಿ ನೀಡಿರುವ ಸೂಚನೆ ಮತ್ತು ನಿರ್ದೇಶನಗಳನ್ನು ಎಲ್ಲಾ ಅಧಿಕಾರಿಗಳು ಚಾಚು ತಪ್ಪದೇ ಪಾಲಿಸಬೇಕೆಂದು ಸೂಚಿಸಲಾಯಿತು.
ಸಭೆಯಲ್ಲಿ ಗ್ರಾಮೀಣ ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಂಜಿತ್ ಕುಮಾರ್, ಉಪ ಕಾರ್ಯದರ್ಶಿ ಜಗನ್ನಾಥ ಮೂರ್ತಿ, ಎಲ್ಲಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ: ಗಡಿ ಜಿಲ್ಲೆಯಲ್ಲಿ ಬಿಸಿಲಿನಿಂದ ಜನರು ಹೈರಾಣ: ಹವಾಮಾನ ಇಲಾಖೆಯಿಂದ ತಾಪಮಾನ ಏರಿಕೆ ಎಚ್ಚರಿಕೆ - Rising Temperature