ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯು ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆ. ಶಿಕಾರಿಪುರ ಶಾಸಕರಾಗಿದ್ದ ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾದಾಗ ಜಿಲ್ಲೆಯ ಸಮಗ್ರವಾದ ಅಭಿವೃದ್ಧಿ ಕಂಡಿತ್ತು. ಆದರೂ ಶಿವಮೊಗ್ಗ ಜಿಲ್ಲೆಗೆ ಇನ್ನಷ್ಟು ಅಭಿವೃದ್ಧಿ ಯೋಜನೆಗಳು ಬೇಕಾಗಿವೆ.
ಹಾಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಮಂಜೂರು ಮಾಡಬೇಕಿದೆ. ಮುಖ್ಯವಾಗಿ ಜಿಲ್ಲೆಯಲ್ಲಿ ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ರೈಲು ಮಾರ್ಗ, ಜೋಗ ಜಲಪಾತದಲ್ಲಿ ನಡೆಯುತ್ತಿರುವ ಸಮಗ್ರ ಅಭಿವೃದ್ಧಿ ಕಾಮಗಾರಿ, ಶಿವಮೊಗ್ಗ ಸಮೀಪದ ಕೋಟೆಗಂಗೂರು ಗ್ರಾಮದ ಬಳಿ ರೈಲ್ವೆ ಕೋಚಿಂಗ್ ಡಿಪೋ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿವೆ. ಅಲ್ಲದೆ ಹಿಂದೆ ಜಿಲ್ಲೆಗೆ ಮಂಜೂರಾಗಿದ್ದ ಆಯುಷ್ ವಿಶ್ವ ವಿದ್ಯಾನಿಲಯಕ್ಕೆ ಜಾಗ ನಿಗದಿಯಾಗಿದ್ದು, ಮುಂದಿನ ಕಾಮಗಾರಿಗಳಿಗೆ ಹಣ ಮೀಸಲಿಡಬೇಕಿದೆ. ಏತ ನೀರಾವರಿ ಯೋಜನೆಗಳು ಜಿಲ್ಲೆಗೆ ಅವಶ್ಯಕತೆ ಇದೆ. ರಾಜ್ಯದಲ್ಲಿಯೇ ಉತ್ತಮ ವಿಮಾನ ನಿಲ್ದಾಣ ಎಂದು ಪ್ರಸಿದ್ಧಿ ಪಡೆದಿರುವ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ರಾತ್ರಿ ವೇಳೆ ವಿಮಾನ ಲ್ಯಾಂಡಿಂಗ್ ಆಗಲು ವ್ಯವಸ್ಥೆ ಆಗಬೇಕಿದೆ. ಈ ಸಲ ಬರಗಾಲ ಆವರಿಸಿದ್ದು, ಜಿಲ್ಲೆಯ ರೈತರು, ಜಾನುವಾರು ಹಾಗೂ ಮೇವುಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಅನುದಾನವನ್ನು ನಿರೀಕ್ಷಿಸಲಾಗುತ್ತಿದೆ.
ಜಿಲ್ಲೆಯ ರೈತರ ಸಮಸ್ಯೆ ಹಾಗೂ ಬಜೆಟ್ನಲ್ಲಿ ಆಗಬೇಕಾದ ಯೋಜನೆಗಳ ಕುರಿತು ರಾಜ್ಯ ರೈತ ಸಂಘದ ಅಧ್ಯಕ್ಷ ಬಸವರಾಜಪ್ಪ ಮಾತನಾಡಿ, ರೈತರ ಬಡ್ಡಿ ಮನ್ನಾ ಮಾಡದೆ, ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ವಿದ್ಯುಚ್ಛಕ್ತಿ ಖಾಸಗೀಕರಣ ಮಾಡಬಾರದು. ರೈತರ ಐಪಿ ಸೆಟ್ಗಳಿಗೆ ಸ್ವಯಂ ಎಚ್ಐ ಯೋಜನೆಯನ್ನು ತರಲಾಗಿದೆ. ಇದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಅದನ್ನು ವಾಪಸ್ ಪಡೆಯಬೇಕು. ಅಕ್ರಮ- ಸಕ್ರಮದಲ್ಲಿ ರೈತನಿಗೆ ವಿದ್ಯುತ್ ಕಂಬ, ಕೇಬಲ್ ಹಾಕಿ ಕೊಡಬೇಕು. ಬರಗಾಲದಲ್ಲಿ ಮನ್ ರೇಗಾದಲ್ಲಿ ನೂರು ದಿನ ಇರುವ ಮಾನವ ದಿನಗಳನ್ನು 200 ದಿನಗಳಿಗೆ ವಿಸ್ತರಿಸಬೇಕು. ಕೂಲಿ ವೆಚ್ಚವನ್ನು ಹೆಚ್ಚಿಸಬೇಕು ಎಂದರು.
ಇನ್ನು ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಇವರಿಗೆ 1.40 ಲಕ್ಷದಿಂದ 5 ಲಕ್ಷಕ್ಕೆ ಹಣ ಏರಿಸಬೇಕು. ನೀರಾವರಿ ಯೋಜನೆಯನ್ನು ಕಾಲಮಿತಿಯೊಳಗೆ ಮುಗಿಸಬೇಕು. ಏತ ನೀರಾವರಿ ಯೋಜನೆಯಡಿ ಕೆರೆ ತುಂಬಿಸುವ ಕೆಲಸ ಮಾಡಬೇಕು. ಬರಗಾಲಕ್ಕೆ ಕೇಂದ್ರದ ಕಡೆ ಬೆರಳು ತೋರಿಸದೇ ಹಣ ಬಿಡುಗಡೆ ಮಾಡಬೇಕು. ಕೇವಲ ಗ್ಯಾರಂಟಿ ಯೋಜನೆಯಲ್ಲೇ ಮುಳುಗದೆ ಬೇರೆ ಯೋಜನೆಗಳ ಕಡೆ ಗಮನ ಹರಿಸಬೇಕಿದೆ. ಬರಗಾಲದಲ್ಲಿ ರೈತರನ್ನು ಕಡೆಗಣಿಸಬಾರದು. ಕಡೆಗಣಿಸಿದರೆ ಮುಂದೆ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದರು.
ಜಿಲ್ಲೆಯ ಕೈಗಾರಿಕೆ ಹಾಗೂ ಹೊಸ ಯೋಜನೆಗಳ ಕುರಿತು ಜಿಲ್ಲಾ ಕೈಗಾರಿಕಾ ಹಾಗೂ ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ಗೋಪಿನಾಥ್ ಮಾತನಾಡಿ, ರಾಜ್ಯ ಸರ್ಕಾರ ತನ್ನ ಮುಂಗಡ ಪತ್ರವನ್ನು ಮಂಡಿಸುತ್ತಿದೆ. ಕಳೆದ ಬಜೆಟ್ನಲ್ಲಿ ಘೋಷಿಸಿದ ಅನುದಾನವನ್ನು ಮೊದಲು ನೀಡಬೇಕು. ಕಳೆದ ವರ್ಷ ಪ್ರಾರಂಭವಾದ ಯೋಜನೆಯನ್ನು ಪೂರ್ಣ ಮಾಡಬೇಕು. ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಆಯುಷ್ ಆರೋಗ್ಯ ವಿಶ್ವ ವಿದ್ಯಾನಿಲಯಕ್ಕೆ ಜಾಗವನ್ನು ಕಾಯ್ದಿರಿಸಲಾಗಿದೆ. ಆದರೆ, ಇನ್ನೂ ಅನುದಾನ ಮಾತ್ರ ಬಿಡುಗಡೆ ಮಾಡಿಲ್ಲ. ಕನಿಷ್ಠ ಆಡಳಿತಾಧಿಕಾರಿಯನ್ನು ನೇಮಕ ಮಾಡಿಲ್ಲ. ಈ ಬಜೆಟ್ ನಲ್ಲಾದರೂ ವಿಶ್ವ ವಿದ್ಯಾನಿಲಯ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಬೇಕು ಎಂದರು.
ಕೇಂದ್ರ ಸರ್ಕಾರ ಪ್ರಥಮ ಭಾರಿ ಪ್ರವಾಸೋದ್ಯಮಕ್ಕೆ 75 ಸಾವಿರ ಕೋಟಿ ರೂ ಮೀಸಲಿಟ್ಟಿದೆ. ಈ ಹಣವನ್ನು ರಾಜ್ಯಗಳಿಗೆ ಬಡ್ಡಿ ರಹಿತವಾದ ಸಾಲ ನೀಡುತ್ತಿದೆ. ಈ ಸಾಲವನ್ನು ಪಡೆದು ಮಲೆನಾಡಿನ ನಾಲ್ಕೈದು ಜಿಲ್ಲೆಗಳನ್ನು ಒಂದುಗೂಡಿಸಿ ಮಲೆನಾಡು ಪ್ರವಾಸೋದ್ಯಮ ಹಬ್ ಅನ್ನಾಗಿ ಮಾಡಬೇಕಿದೆ. ಇಲ್ಲಿ ಸಾರ್ವಜನಿಕರ ಪಾಲ್ಗೂಳ್ಳುವಿಕೆಯನ್ನು ಮಾಡಿ ಪ್ರವಾಸೋದ್ಯಮವನ್ನು ಅಭಿವೃದ್ದಿ ಪಡಿಸಬೇಕಿದೆ ಎಂದರು.
ಶಿವಮೊಗ್ಗದ ಸಿದ್ಲಿಪುರ ಕೈಗಾರಿಕಾ ವಸಾಹತು ಪ್ರದೇಶ 65 ಎಕರೆಗೆ ಅನುಮೋದನೆ ನೀಡಬೇಕಿದೆ. ಬೆಂಗಳೂರು - ಮುಂಬೈಗೆ ಕೈಗಾರಿಕಾ ಕಾರಿಡಾರ್ಗೆ ಅನುಮೋದನೆ ನೀಡಿದೆ. ಇದಕ್ಕೆ ಶಿವಮೊಗ್ಗ ಸೇರಲ್ಲ. ಇದರಿಂದ ಶಿವಮೊಗ್ಗದಿಂದ ಹರಿಹರಕ್ಕೆ ಕೈಗಾರಿಕಾ ಕಾರಿಡಾರ್ ಮಾಡಬೇಕಿದೆ. ಶಿವಮೊಗ್ಗ ವೇಗವಾಗಿ ಬೆಳೆಯುವ ನಗರದ ಪ್ರದೇಶವಾಗಿದೆ. ಶಿವಮೊಗ್ಗ, ಭದ್ರಾವತಿ, ಆಯನೂರು ಸೇರಿ ಬೃಹತ್ ಶಿವಮೊಗ್ಗವನ್ನಾಗಿ ರಚನೆ ಮಾಡಬೇಕಿದೆ. ಮುಂದೆ ಮೇಟ್ರೋ ಮಾಡಲು ಈಗಲೇ ತಯಾರಿ ಮಾಡಬೇಕಿದೆ ಎಂದು ಹೇಳಿದರು.
ಓದಿ: ದೆಹಲಿ ಚಲೋ ಹೋರಾಟ: ಭೋಪಾಲ್‌ನಲ್ಲಿ ಕರ್ನಾಟಕದ ರೈತರು ಪೊಲೀಸ್ ವಶಕ್ಕೆ, ಉಜ್ಜಯಿನಿಗೆ ಸ್ಥಳಾಂತರ