ಬೆಳಗಾವಿ: ಚಿಕ್ಕೋಡಿ ಲೋಕಸಭೆ ಬಿಜೆಪಿ ಟಿಕೆಟ್ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪಾಲಾಗಿದೆ. ಆದರೆ, ಬೆಳಗಾವಿ ಟಿಕೆಟ್ ಕಗ್ಗಂಟು ಮಾತ್ರ ಇನ್ನು ಬಗೆಹರಿದಿಲ್ಲ. ಮೂವರು ಘಟಾನುಘಟಿ ನಾಯಕರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಸಚಿವ ಮುರುಗೇಶ ನಿರಾಣಿ ಹಾಗೂ ಮಾಜಿ ಸಂಸದ ರಮೇಶ್ ಕತ್ತಿ ಟಿಕೆಟ್‌ಗೆ ಪಟ್ಟು ಹಿಡಿದಿದ್ದಾರೆ.
ಹಾಲಿ ಸಂಸದೆ ಮಂಗಳಾ ಸುರೇಶ್ ಅಂಗಡಿ ಅವರಿಗೆ ಟಿಕೆಟ್ ಕೈ ತಪ್ಪೋದು ಬಹುತೇಕ ಪಕ್ಕಾ ಆಗಿದ್ದು, ಅವರ ಬದಲಾಗಿ ಮೂರು ಜನರ ಹೆಸರು ಮುನ್ನೆಲೆಗೆ ಬಂದಿದೆ. ಅಂಗಡಿ ಕುಟುಂಬದ ಬೀಗರಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಅವಕಾಶ ಕೊಡುವ ಬಗ್ಗೆ ಚರ್ಚೆ ಆಗುತ್ತಿದೆ. ಶೆಟ್ಟರ್ ಅವರಿಗೆ ಟಿಕೆಟ್ ಕೊಟ್ಟರೆ ಅಂಗಡಿ ಕುಂಟುಂಬ ಸಹ ಸಾಥ್ ನೀಡಲಿದೆ ಎಂದು ಬಿಜೆಪಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಮೂರು ಕ್ಷೇತ್ರಗಳಿಗೆ ಪಂಚಮಸಾಲಿ ಸಮಾಜದ ಬೇಡಿಕೆ: ಪಂಚಮಸಾಲಿ ಸಮುದಾಯದಿಂದ ಮೂರು ಕ್ಷೇತ್ರಗಳಿಗೆ ಟಿಕೆಟ್ ಬೇಡಿಕೆ ಇಡಲಾಗಿತ್ತು. ಬೆಳಗಾವಿ, ಬಾಗಲಕೋಟೆ ಹಾಗೂ ಹಾವೇರಿ ಕ್ಷೇತ್ರಗಳಿಗೆ ಟಿಕೆಟ್ ನೀಡುವಂತೆ ಆಗ್ರಹ ಕೇಳಿ ಬಂದಿತ್ತು. ಆದರೆ, ಹಾವೇರಿ, ಬಾಗಲಕೋಟೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪಿ.ಸಿ.ಗದ್ದಿಗೌಡರ ಪಾಲಾದ ಹಿನ್ನೆಲೆ ಬೆಳಗಾವಿ ಲೋಕಸಭಾ ಕ್ಷೇತ್ರ ಪಂಚಮಸಾಲಿ ಸಮಾಜಕ್ಕೆ ಸಿಗುವ ನಿರೀಕ್ಷೆಯಿದೆ. ಹಾಗಾಗಿ, ಮಾಜಿ ಸಚಿವ ಮುರುಗೇಶ ನಿರಾಣಿ ಕೂಡ ಬೆಳಗಾವಿ ಟಿಕೆಟ್‌ಗೆ ಲಾಬಿ ನಡೆಸುತ್ತಿದ್ದಾರೆ. ಇನ್ನು ಚಿಕ್ಕೋಡಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬೆಳಗಾವಿ ಟಿಕೆಟ್‌ಗೆ ರಮೇಶ ಕತ್ತಿ ಪಟ್ಟು ಹಿಡಿದಿದ್ದಾರೆ. ರಮೇಶ ಕತ್ತಿ ಪರ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕೂಡ ತೀವ್ರ ಲಾಬಿ ನಡೆಸುತ್ತಿದ್ದಾರೆ.
ದೆಹಲಿಗೆ ಹಾರಿದ ಅಂಗಡಿ ಕುಟುಂಬ: ಹಾಲಿ ಸಂಸದೆ ಮಂಗಳಾ ಅಂಗಡಿ ಅವರಿಗೆ ಈ ಬಾರಿ ಬೆಳಗಾವಿ ಬಿಜೆಪಿ ಟಿಕೆಟ್ ತಪ್ಪುವ ಭೀತಿ ಹಿನ್ನೆಲೆಯಲ್ಲಿ ಪುತ್ರಿಯರೊಂದಿಗೆ ಮಂಗಳಾ ಅಂಗಡಿ ದೆಹಲಿಗೆ ತೆರಳಿದ್ದಾರೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನಿಂದ ಸ್ಫೂರ್ತಿ ಪಾಟೀಲ, ಶ್ರದ್ಧಾ ಶೆಟ್ಟರ್ ಕೂಡ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ಕೇಂದ್ರ ನಾಯಕರನ್ನು ಭೇಟಿಯಾಗಿ ಇನ್ನೊಂದು ಅವಧಿಗೆ ಟಿಕೆಟ್ ಕೊಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆ. ಕೆಲ ದಿನಗಳ ಹಿಂದೆ ಬೆಳಗಾವಿಗೆ ಆಗಮಿಸಿದ್ದ ವೇಳೆ ಮನೆಗೆ ಬಂದಾಗ ಜೆ.ಪಿ.ನಡ್ಡಾ ಅವರಿಗೂ ನಮ್ಮ ಕುಟುಂಬಕ್ಕೆ ಟಿಕೆಟ್ ನೀಡುವಂತೆ ಮಂಗಳಾ ಅಂಗಡಿ ಮನವಿ ಮಾಡಿಕೊಂಡಿದ್ದರು. ಈಗ ದೆಹಲಿಯಲ್ಲಿ ಬೀಡು ಬಿಟ್ಟು ಟಿಕೆಟ್ ಗಿಟ್ಟಿಸಿಕೊಳ್ಳಲು ಮಂಗಳಾ ಅಂಗಡಿ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಅಂಗಡಿ ಕುಟುಂಬದ ಪರ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ಲಾಬಿ ನಡೆಸುತ್ತಿದ್ದು, ಬಿಎಸ್ ಯಡಿಯೂರಪ್ಪ, ವಿಜಯೇಂದ್ರ ಮೂಲಕ ಶೆಟ್ಟರ್ ಲಾಬಿ ನಡೆಸುತ್ತಿದ್ದಾರೆ. ಸೊಸೆ ಶ್ರದ್ಧಾ ಶೆಟ್ಟರ್ಗೆ ಟಿಕೆಟ್ ಕೊಡಿಸುವ ಪ್ರಯತ್ನವೂ ನಡೆದಿದೆ.
ಅಲ್ಲದೇ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಹಿರಿಯ ಬಿಜೆಪಿ ಮುಖಂಡ ಶಂಕರಗೌಡ ಪಾಟೀಲ, ಚಿಕ್ಕೋಡಿ ಟಿಕೆಟ್ ಕೈತಪ್ಪಿರುವ ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಪುತ್ರ ಅಮಿತ್ ಕೋರೆ ರೇಸ್ನಲ್ಲಿದ್ದಾರೆ. ಒಟ್ಟಿನಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ವಲಸಿಗರಿಗೆ ಟಿಕೆಟ್ ಸಿಗುತ್ತೆ ಎಂಬ ಚರ್ಚೆ ಜೋರಾಗಿದ್ದು, ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರ ಹೈಕಮಾಂಡ್ ತಿರ್ಮಾನಕ್ಕೆ ನಾನು ಬದ್ಧ: ಜಗದೀಶ್ ಶೆಟ್ಟರ್