ತುಮಕೂರು: ಬಂಡೆ ಬ್ಲಾಸ್ಟ್ ಮಾಡುವ ವೇಳೆ ಬಿಹಾರ ಮೂಲದ ಇಬ್ಬರು ಕಾರ್ಮಿಕರು ಧಾರುಣವಾಗಿ ಸಾವಿಗೀಡಾಗಿರುವ ಘಟನೆ ತುಮಕೂರು ತಾಲೂಕು ಕೌತಮಾರನಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಬಿಹಾರ ಮೂಲದ ಮೊಹಮ್ಮದ್ ಅಬೂಲ್ (29) ಹಾಗೂ ಛತ್ತೀಸ್‌ಗಡ ಮೂಲದ ಮೋನು (24) ಎಂದು ಗುರುತಿಸಲಾಗಿದೆ.
ಕೌತಮಾರನಹಳ್ಳಿ ಸಮೀಪವಿರುವ ಕರ್ನಾಟಕ ಸ್ಟೋನ್ ಕ್ರಷರ್‌ನಲ್ಲಿ ಬಂಡೆ ಸ್ಫೋಟಿಸುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಇಬ್ಬರು ಕಾರ್ಮಿಕರು ಸ್ಥಳದಲ್ಲಿಯೇ ಮೃತರಾಗಿದ್ದು, ಮತ್ತೊಬ್ಬನಿಗೆ ತೀವ್ರ ಗಾಯಗಳಾಗಿದೆ. ತುಮಕೂರಿನ ಹನೀಫ್ ಎಂಬುವವರಿಗೆ ಸೇರಿದ ಕರ್ನಾಟಕ ಸ್ಟೋನ್ ಕ್ರಷರ್‌ನಲ್ಲಿ ಮಂಗಳವಾರ ಈ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.
ಬಡಪಾಯಿಗಳ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ತುಮಕೂರು ತಾಲೂಕು ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಕ್ರಷರ್ಗಳಿದ್ದು, ಬಹುತೇಕ ಹೊರರಾಜ್ಯದ ಕಾರ್ಮಿಕರೇ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಬಹುತೇಕ ಕ್ರಷರ್ ಮಾಲೀಕರು ಸುರಕ್ಷತಾ ಸಾಧನ ನೀಡುವುದೇ ಇಲ್ಲ. ಅಲ್ಲದೇ ಕಾರ್ಮಿಕ ಇಲಾಖೆಯೂ ಸಹ ಈ ಬಗ್ಗೆ ಗಮನ ಹರಿಸುವುದಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಗದಿ ಪಡಿಸುವ ಮಾನದಂಡ ಉಲ್ಲಂಘಿಸಿ ಬಂಡೆ ಕೊರೆಯುತ್ತಿರುವುದರಿಂದ ಇಂತಹ ಅವಘಡಗಳು ಸರ್ವೇ ಸಾಮಾನ್ಯವಾಗುತ್ತಿವೆ.
ಇತ್ತೀಚೆಗಷ್ಟೇ ಅಮಲಾಪುರ ಬಳಿ ಇರುವ ಅಕ್ಷಯ ಸ್ಟೋನ್ ಕ್ರಷರ್‌ನಲ್ಲಿ ಬಂಡೆ ಕೊರೆಯುವ ವೇಳೆ ಕಾರ್ಮಿಕ ಬಿದ್ದು ಮೃತಪಟ್ಟಿದ್ದ. ಇದೀಗ ಈ ದುರ್ಘಟನೆ ನಡೆದಿದೆ. ಕ್ರಷರ್ ಮಾಲೀಕರು ಬಹುತೇಕ ಪ್ರಭಾವಿಗಳಾಗಿದ್ದು, ಪೊಲೀಸರು ಹಾಗೂ ಅಧಿಕಾರಿಗಳ ಜೇಬು ತುಂಬಿಸಿ, ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ. ಇದರಿಂದಾಗಿ ಬಡಪಾಯಿಗಳ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಈ ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಆನೇಕಲ್: ಶಾಲಾ ಕಟ್ಟಡದ ಸೆಂಟ್ರಿಂಗ್ ಕುಸಿದು ಇಬ್ಬರು ಕಾರ್ಮಿಕರು ಸಾವು, 13 ಮಂದಿಗೆ ಗಾಯ