ಬೆಂಗಳೂರು: ಅಪಘಾತಕ್ಕೆ ಕಾರಣವಾದ ಚಾಲಕನ ಮೇಲಿನ ಸಿಟ್ಟಿಗೆ ಕಾರಿನ ಗಾಜು ಪುಡಿಗಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದ ದ್ವಿಚಕ್ರ ವಾಹನ ಸವಾರನನ್ನು ಬೆಳ್ಳಂದೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ನವೀನ್ ರೆಡ್ಡಿ ಬಂಧಿತ ಆರೋಪಿ. ಸೋಮವಾರ ರಾತ್ರಿ ಸರ್ಜಾಪುರ ಮುಖ್ಯ ರಸ್ತೆಯ ದೊಡ್ಡ ಕನ್ನಳ್ಳಿ ಜಂಕ್ಷನ್ ಬಳಿ ಘಟನೆ ನಡೆದಿತ್ತು.
ರಾತ್ರಿ 10 ಗಂಟೆಯ ಸುಮಾರಿಗೆ ಕುಟುಂಬ ಸದಸ್ಯರೊಂದಿಗೆ ಕಾರಿನಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬರು, ರಸ್ತೆ ಗುಂಡಿ ತಪ್ಪಿಸಲು ಬಲ ತಿರುವು ಪಡೆದಿದ್ದರು. ಕಾರು ಚಾಲಕ ಇಂಡಿಕೇಟರ್ ಬಳಸದ ಕಾರಣ ಹಿಂಬದಿಯಿಂದ ಬಂದ ದ್ವಿಚಕ್ರ ವಾಹನ ಸವಾರ ನವೀನ್ ರೆಡ್ಡಿ ಡಿಕ್ಕಿಯಾಗಿ ಕೆಳಕ್ಕೆ ಬಿದ್ದಿದ್ದರು. ಬಳಿಕ ಸಾವರಿಸಿಕೊಂಡು ಮೇಲೆದ್ದು ಕಾರಿನಿಂದ ಕೆಳಗಿಳಿಯುವಂತೆ ಚಾಲಕನಿಗೆ ಹೇಳಿದ್ದರು.
@BlrCityPolice @blrcitytraffic
— Sambit Mahapatra (@mhptra15) August 19, 2024
Please help, they have kid inside the car. pic.twitter.com/7wEOrn4ZDr
ಈ ವೇಳೆ ಕಾರಿನಲ್ಲಿ ಮಗು ಇದೆ ಎಂದಿದ್ದ ಚಾಲಕ ಕೆಳಗಿಳಿಯದೆ ಮೊಬೈಲ್ ಫೋನ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾರಂಭಿಸಿದ್ದರು. ಇದರಿಂದ ಸಿಟ್ಟಿಗೆದ್ದ ಆರೋಪಿ, ಕಾರಿನ ಮುಂದೆ ಬಂದು ವೈಪರ್ ಕಿತ್ತು, ಅದರಿಂದ ಗಾಜು ಒಡೆದು ಆಕ್ರೋಶ ಹೊರಹಾಕಿದ್ದರು.
ಘಟನೆ ಸಂಬಂಧ ಕಾರು ಚಾಲಕ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪೆಟ್ರೋಲ್ ಟ್ಯಾಂಕ್ ಮೇಲೆ ಗೆಳತಿಯನ್ನು ಕೂರಿಸಿಕೊಂಡು ಜಾಲಿ ರೈಡ್, ಯುವಕ ಸೆರೆ - Bike Rider Arrest