ಕಾರವಾರ(ಉತ್ತರ ಕನ್ನಡ): ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟ್‌ಗಳು ಅಳಿವೆ ಪ್ರದೇಶದಲ್ಲಿರುವ ಹೂಳಿನಿಂದಾಗಿ ಹಾನಿಗೊಳಗಾಗಿ ಮುಳುಗಿದ ಘಟನೆ ಗೋಕರ್ಣದ ತದಡಿ ಬಳಿ ನಡೆದಿದೆ.
ಸದ್ಗುರು ಮತ್ತು ಮಂಜುಶ್ರೀ ಹೆಸರಿನ ಬೋಟ್‌ಗಳು ಬಂದರಿನಿಂದ ಮೀನುಗಾರಿಕೆಗೆ ಹೊರಟಿದ್ದವು. ಈ ಸಮಯದಲ್ಲಿ ಉಂಟಾದ ಸಮುದ್ರದ ಇಳಿತದಿಂದಾಗಿ ಬೋಟ್‌ಗಳ ತಳಭಾಗ ಅಳಿವೆಯಲ್ಲಿನ ಭಾರಿ ಪ್ರಮಾಣದ ಹೂಳಿನಲ್ಲಿ ಸಿಕ್ಕಿಕೊಂಡಿದ್ದವು. ಈ ವಿಷಯ ತಿಳಿದ ಸ್ಥಳೀಯ ಮೀನುಗಾರರು, ಕರಾವಳಿ ರಕ್ಷಣಾ ಪೊಲೀಸರು ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿ ಮುಳುಗುತ್ತಿದ್ದ ಬೋಟ್‌ನಲ್ಲಿದ್ದ 10 ಮೀನುಗಾರರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ. ಆದರೆ, ಬೋಟ್‌ಗಳು ಮುಳುಗಡೆಯಾದ ಕಾರಣ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಘಟನೆಗೆ ಅಳಿವೆ ಭಾಗದ ಹೂಳು ಕಾರಣ: ಈ ಬಗ್ಗೆ ತದಡಿ ಮೀನುಗಾರರ ಸಂಘದ ಅಧ್ಯಕ್ಷ ಉಮಾಕಾಂತ ಹೊಸ್ಕಟ್ಟ ಮಾತನಾಡಿ, ಈ ಘಟನೆಗೆ ಅಳಿವೆ ಭಾಗದಲ್ಲಿ ನಲವತ್ತು ವರ್ಷಗಳಿಗೂ ಹೆಚ್ಚಿನ ಸಮಯದಿಂದ, ಇಲ್ಲಿ ತುಂಬಿರುವ ಹೂಳಿನಿಂದಾಗಿ ಮೀನುಗಾರಿಕೆಗೆ ಜೀವಭಯ ಉಂಟುಮಾಡಿದೆ ಎಂದರು.
ಈಗಾಲಾದರೂ ಹೂಳಿನಿಂದ ಮುಕ್ತಿ ನೀಡಿ: ಕಳೆದ ಅನೇಕ ವರ್ಷಗಳಿಂದ ತದಡಿ ಮೀನುಗಾರರ ಸಂಘ ಮತ್ತು ಮೀನುಗಾರರ ವತಿಯಿಂದ ಹೂಳು ತೆಗೆಸಿ ಮೀನುಗಾರಿಕೆ ಬೋಟ್ ಮತ್ತು ಮೀನುಗಾರರ ಸುರಕ್ಷೆತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮೇಲಿಂದ ಮೇಲೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬರಲಾಗಿದೆ. ಆದರೆ, ಈವರೆಗೆ ಈ ಕುರಿತಂತೆ, ಸಂಬಂಧಿಸಿದ ಇಲಾಖೆ ಮತ್ತು ಸರ್ಕಾರ ಗಮನಹರಿಸಿಲ್ಲ. ಈಗಾಲಾದರೂ ಸಂಬಂಧಿಸಿದವರು ಜಾಗೃತರಾಗಿ ಹೂಳಿನಿಂದ ಮುಕ್ತಿ ನೀಡಿ, ಇಂತಹ ದುರ್ಘಟನೆಗಳಿಂದ ಮೀನುಗಾರರನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಶಿರೂರು ಬಳಿ ಕಾರ್ಯಾಚರಣೆಯಲ್ಲಿ ಹಗ್ಗ, ಕಟ್ಟಿಗೆ ತುಂಡು ಪತ್ತೆ: ಬೆಂಜ್ ಲಾರಿಯ ಸುಳಿವು? - Shiruru hill collapsed operation