ಶಿರಸಿ (ಉತ್ತರ ಕನ್ನಡ): ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಶಿರಸಿ ತಾಲೂಕಿನ ಪೂರ್ವ ಭಾಗದಲ್ಲಿನ ಬನವಾಸಿಯಲ್ಲಿ ವರದಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ, ಪ್ರವಾಹದ ಭೀತಿ ಸೃಷ್ಟಿಯಾಗಿದ್ದು, ಸಾವಿರಾರು ಎಕರೆ ಕೃಷಿ ಪ್ರದೇಶ ಮುಳುಗಡೆಯಾಗಿದೆ.
ನದಿ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭತ್ತ, ಬಾಳೆ, ಶುಂಠಿ, ಅನಾನಸ್ ಹಾಗೂ ಅಡಕೆ ತೋಟಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಬನವಾಸಿಯ ಮೊಗವಳ್ಳಿ, ಭಾಶಿ, ಅಜ್ಜರಣಿ, ಕಾಂತ್ರಜಿ, ಮತ್ತುಗುಣಿ ಮತ್ತು ತಿಗಣಿ ಗ್ರಾಮಗಳ ಕೃಷಿ ಭೂಮಿಗಳು ಜಲಾವೃತವಾಗಿ, ಅಪಾರ ಹಾನಿಯಿಂದ ರೈತರು ನಷ್ಟ ಅನುಭವಿಸುವಂತಾಗಿದೆ.
ಕಾಳಜಿ ಕೇಂದ್ರ: ಬನವಾಸಿಯ ಉಪ್ಪಾರ ಕೇರಿಗೆ ವರದಾ ನದಿಯ ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಅಜ್ಜರಣಿ ಗ್ರಾಮದ ಸಂಪರ್ಕ ಕಡಿತವಾಗಿದ್ದು, ಮುತಗುಣಿ ಗ್ರಾಮಸ್ಥರು ಅಗತ್ಯ ವಸ್ತುಗಾಗಿ ಬರಲು ಹರಸಾಹಸ ಪಡುವ ಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತದಿಂದ ಮೊಗವಳ್ಳಿಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗುತ್ತಿದೆ.
ವರದಾ ನದಿಯಿಂದ ಪ್ರತಿ ವರ್ಷವೂ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ. ಆದರೆ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಆಡಳಿತ ವಿಫಲವಾಗಿದೆ. ಇದರಿಂದ ಸೇತುವೆ ಸಂಪರ್ಕ, ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಬೇಕಾದ ಅಗತ್ಯವಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅಲ್ಲದೇ, ವರದಾ ನದಿಯಿಂದ ಸಂತ್ರಸ್ತರಾಗಿರುವ ಅಜ್ಜರಣಿ - ಮುತಗುಣಿ ಗ್ರಾಮಕ್ಕೆ ಇದ್ದ ಒಂದು ಸಂಪರ್ಕ ಸೇತುವೆಯನ್ನು ಕಳೆದ ಮೂರು ವರ್ಷಗಳ ಹಿಂದೆ ಕೆಡವಲಾಗಿತ್ತು. ಬಳಿಕ ಅದನ್ನು ಪುನರ್ ನಿರ್ಮಾಣ ಮಾಡುವಲ್ಲಿ ಸರ್ಕಾರ ವಿಫಲವಾಗಿದ್ದು, ಪ್ರತಿ ವರ್ಷ ನೆರೆಯ ಸಂದರ್ಭದಲ್ಲಿಯೂ ನೂರಾರು ಕುಟುಂಬದವರು ಸಂಕಷ್ಟಪಡುವ ಸ್ಥಿತಿ ಎದುರಾಗಿದೆ.
ಹಾವೇರಿಯಲ್ಲೂ ಜನರಿಗೆ ಸಂಕಷ್ಟ: ವರದಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕಾರಣ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದ ಬ್ರಿಜ್ಡ್ ಕಂ ಬ್ಯಾರೇಜ್ ಮುಳುಗಡೆಯಾಗಿದೆ. ಈ ಮಧ್ಯೆ ಜನರು ಜೀವದ ಹಂಗು ತೊರೆದು, ನೀರಿನ ಸೆಳೆತ ಲೆಕ್ಕಿಸದೇ ನದಿ ದಾಟುತ್ತಿದ್ದಾರೆ. ಬ್ರಿಜ್ಡ್ ಕಂ ಬ್ಯಾರೇಜ್ಗೆ ಸರಿಯಾದ ತಡೆಗೋಡೆ ಕೂಡ ಇಲ್ಲ. ಸೇತುವೆ ತುಂಬಿ ಹರಿಯುತ್ತಿರುವ ವೇಳೆ ಜನರು ದಾಟದಂತೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕಟ್ಟುನಿಟ್ಟಿನ ಆದೇಶ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮಳೆ ಅಬ್ಬರ: ರಾಜ್ಯದ ಕರಾವಳಿ, ಮಲೆನಾಡಿನ ಜಿಲ್ಲೆಗಳಿಗೆ ಶುಕ್ರವಾರವೂ ರೆಡ್ ಅಲರ್ಟ್ - Rain Red Alert