ಕೊಪ್ಪಳ: ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಿತ್ತುಹೋದ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಕಿತ್ತು ಹೋದ ಗೇಟ್ ಮತ್ತೆ ನಿರ್ಮಿಸಲು ಹರಸಾಹಸ ನಡೆಯುತ್ತಿದೆ. ಕೊಪ್ಪಳ ಮತ್ತು ಹೊಸಪೇಟೆಯಲ್ಲಿ ಗೇಟ್ ನಿರ್ಮಾಣ ಭರದಿಂದ ಸಾಗಿದ್ದು, ಗುರುವಾರ ನೀರಿಗಿಳಿಸುವ ಕಾರ್ಯ ನಡೆಯಲಿದೆ.
ಕೊಪ್ಪಳದ ಹೊಸಳ್ಳಿ ಬಳಿ ಇರುವ ಹಿಂದೂಸ್ತಾನ್ ಇಂಜಿನಿಯರಿಂಗ್ ಮತ್ತು ಹೊಸಪೇಟೆಯ ನಾರಾಯಣ ಸ್ಟೀಲ್ಸ್ನಲ್ಲಿರುವ ಹಿಂದೂಸ್ತಾನ್ ಇಂಜಿನಿಯರಿಂಗ್ನಲ್ಲಿ ಸ್ಟಾಪ್ ಲಾಗ್ ಗೇಟ್ಗಳು ನಿರ್ಮಾಣವಾಗುತ್ತಿವೆ. ಸದ್ಯ ತಾತ್ಕಾಲಿಕ ಗೇಟ್ ನಿರ್ಮಾಣ ಮಾಡಲು ತಂತ್ರಜ್ಞರು ಸಲಹೆ ನೀಡಿದ್ದು, ಐದು ಭಾಗವಾಗಿ ತಯಾರಿಸಿ ನೀರಿನಲ್ಲಿ ಕೆಳಗಿಳಿಸಲು ಪ್ರಯತ್ನ ನಡೆದಿದೆ. ಇದರ ಅಂಗವಾಗಿ ಸದ್ಯ ಕೊಪ್ಪಳ ತಾಲೂಕಿನ ಹೊಸಳ್ಳಿ ಹಿಂದೂಸ್ತಾನ್ ಇಂಜಿನಿಯರಿಂಗ್ನಲ್ಲಿ 2 ಸ್ಟಾಪ್ ಲಾಗ್ ಗೇಟ್ಗಳು ಮತ್ತು ಹೊಸಪೇಟೆಯಲ್ಲಿ 3 ಸ್ಟಾಪ್ ಲಾಗ್ ಗೇಟ್ಗಳು ನಿರ್ಮಾಣವಾಗುತ್ತಿವೆ.
ಸ್ಟಾಪ್ ಲಾಗ್ ಗೇಟ್ ವಿನ್ಯಾಸ: ಪ್ರತಿ ಸ್ಟಾಪ್ ಲಾಗ್ ಗೇಟ್ 64x4 ಅಳತೆ ಹೊಂದಿದ್ದು, ಪ್ರತಿ ಸ್ಟಾಪ್ ಲಾಗ್ 13 ಟನ್ ತೂಕ ಹೊಂದಿದೆ. ಐದು ಗೇಟ್ಗಳ ಒಟ್ಟು ತೂಕ 65 ಟನ್ ಆಗಲಿದೆ. ಸ್ಟಾಪ್ ಲಾಗ್ ಗೇಟ್ಗಳಿಗೆ 10 ಎಂಎಂ, 16 ಎಂಎಂ, 20 ಎಂಎಂ ಸ್ಟೀಲ್ ಪ್ಲೇಟ್ಗಳ ಬಳಕೆ ಮಾಡಲಾಗಿದೆ. ಮೊದಲನೇ ಗೇಟ್ ಕೆಲಸ ಬುಧವಾರ (ಇಂದು) ಶೇ 75ರಷ್ಟು ಕೆಲಸ ಮುಕ್ತಾಯವಾಗಿದೆ. 20ಕ್ಕೂ ಹೆಚ್ಚು ಕಾರ್ಮಿಕರು ಸ್ಟಾಪ್ ಲಾಗ್ ಗೇಟ್ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆಯೊಳಗೆ ಸ್ಟಾಪ್ ಲಾಗ್ ಗೇಟ್ ನಿರ್ಮಾಣ ಕಾರ್ಯ ಮುಕ್ತಾಯವಾಗಲಿದೆ.
ಮೊದಲಿದ್ದ ಕ್ರಸ್ಟ್ ಗೇಟ್ ವಿನ್ಯಾಸ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ನ ಮೂಲ ಆಕಾರ ಅಗಲ 60 ಅಡಿ, ಉದ್ದ 20 ಅಡಿ ಇದ್ದು, 48 ಟನ್ ಭಾರ ಹೊಂದಿತ್ತು. ಸದ್ಯ ಅದರ ಚೈನ್ ಲಿಂಕ್ ಕಟ್ಟಾಗಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.
ಇನ್ನು, ಗೇಟ್ ಅಳವಡಿಸುವ ಪ್ರಾಥಮಿಕ ಹಂತದ ಕೆಲಸಕ್ಕೆ ಇಂದು ಸಚಿವ ಜಮೀರ್ ಅಹಮದ್ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಇದನ್ನೂ ಓದಿ: ಭಾರತದ ನಯಾಗರ "ಗೋಕಾಕ್ ಫಾಲ್ಸ್" ಅಭಿವೃದ್ಧಿಯಿಂದ ವಂಚಿತ: ಕನಸಾಗಿಯೇ ಉಳಿದ ಗಾಜಿನ ಸೇತುವೆ - INDIAS NIAGARA GOKAK FALLS