ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ 9 ಕಡೆ ಕೇಂದ್ರಗಳಲ್ಲಿ ಅಕ್ರಮ ನಡೆದಿದ್ದು,ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಲಾಗಿದೆ. ಪರೀಕ್ಷಾ ಅಕ್ರಮಕ್ಕೆ ಶಿಕ್ಷಕರು ಸಹಕಾರ ನೀಡಿರುವ ಕುರಿತು ಪರಿಶೀಲನೆ ನಡೆದಿದ್ದು, ಮೇಲ್ನೋಟಕ್ಕೆ ಆರೋಪ ಸಾಬೀತಾದಲ್ಲಿ ಶಿಕ್ಷಕರ ವಿರುದ್ಧ ಕ್ರಮಕ್ಕೆ ಆದೇಶಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ಇಂದು ರಾಜ್ಯಾದ್ಯಂತ ಎಸ್ಎಸ್ಎಲ್ ಸಿ ಪರೀಕ್ಷೆ 1ರ ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ನಡೆಯಿತು. ಸಮಾಜ ವಿಜ್ಞಾನ ವಿಷಯಕ್ಕೆ 841,120 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಅದರಲ್ಲಿ 827,773 ವಿದ್ಯಾರ್ಥಿಗಳು ಇಂದು ಪರೀಕ್ಷೆಗೆ ಹಾಜರಾದರು,13,347 ವಿದ್ಯಾರ್ಥಿಗಳು ಗೈರಾಗಿದ್ದು ಶೇ.98.4ರಷ್ಟು ಹಾಜರಾತಿ ಇದೆ. 9 ಕಡೆ ಪರೀಕ್ಷಾ ಅಕ್ರಮ ನಡೆದಿರುವ ಕುರಿತು ವರದಿಯಾಗಿದೆ.
ಪರೀಕ್ಷೆಯಲ್ಲಿ ನಕಲು: ಬೆಂಗಳೂರು ದಕ್ಷಿಣ ಜಿಲ್ಲೆಯ ಕೆಪಿಎಸ್ ಶಾಲೆಯಲ್ಲಿ ಪರೀಕ್ಷಾ ನಕಲು, ಧಾರವಾಡದ ಜಿವಿ ಜೋಶಿ ರೋಟರಿ ಇಂಗ್ಲಿಷ್ ಹೈಸ್ಕೂಲ್ ನಲ್ಲಿ 1,ಅಂಜುಮನ್ ಉರ್ದು ಹೈಸ್ಕೂಲ್ ನಲ್ಲಿ 2 ,ಹುಬ್ಬಳ್ಳಿ ಸಿಟಿ ಹೈಸ್ಕೂಲ್ನಲ್ಲಿ ಒಂದು ಪರೀಕ್ಷಾ ನಕಲು ಹಾಗೂ ಮೊಬೈಲ್ ಹೊಂದಿರುವ ಘಟನೆ ಪತ್ತೆಯಾಗಿದೆ. ಕಲಬುರಗಿಯ ಜೀವರ್ಗಿ ಜಿಹೆಚ್ಪಿಎಸ್ ಶಾಲೆಯಲ್ಲಿ ನಕಲು ಹಾಗೂ ರಾಯಚೂರಿನ ಮಾನ್ವಿ ಸರ್ಕಾರಿ ಹೈಸ್ಕೂಲ್ನಲ್ಲಿ 3 ನಕಲು ಪ್ರಕರಣ ಸೇರಿ ಒಟ್ಟು ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ 9 ಪ್ರಕರಣಗಳು ವರದಿಯಾಗಿವೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಮಾಹಿತಿ ನೀಡಿದೆ.
ಮಾರ್ಚ್ 25 ರಂದು ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆ-1ರ ಪ್ರಥಮ ಭಾಷೆ ಪರೀಕ್ಷೆ ವೇಳೆ ಕೆಲ ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದರೂ ಕ್ರಮ ಕೈಗೊಳ್ಳದಿರುವುದು ಮತ್ತು ನಕಲು ಮಾಡಲು ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಎರಡು ಶಾಲೆಯ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಲಾಗಿತ್ತು. ಅದರ ಬೆನ್ನಲ್ಲೇ ಇಂದು ಮತ್ತೆ ಪರೀಕ್ಷಾ ಅಕ್ರಮ ಪ್ರಕರಣಗಳು ಮತ್ತೆ ನಡೆದಿವೆ.
ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ 9 ಕಡೆ ಪರೀಕ್ಷಾ ಅಕ್ರಮ ನಡೆದಿದ್ದು,ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಲಾಗಿದೆ. ಪರೀಕ್ಷಾ ಅಕ್ರಮಕ್ಕೆ ಶಿಕ್ಷಕರು ಸಹಕಾರ ನೀಡಿದ್ದರ ಪರಿಶೀಲನೆ ನಡೆದಿದ್ದು ಮೇಲ್ನೋಟಕ್ಕೆ ಆರೋಪ ಸಾಬೀತಾದಲ್ಲಿ ಶಿಕ್ಷಕರ ವಿರುದ್ಧ ಕ್ರಮಕ್ಕೆ ಆದೇಶಿಸಲಾಗುತ್ತದೆ.