ಬೆಂಗಳೂರು: 2023-24 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರ ಮೌಲ್ಯಮಾಪನ ಮುಕ್ತಾಯಗೊಂಡಿದ್ದು, ದತ್ತಾಂಶಗಳ ಗಣಕೀಕರಣಗೊಳಿಸುವ ಕಾರ್ಯ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಮೇ 8 ಅಥವಾ 10 ರಂದು ಫಲಿತಾಂಶ ಪ್ರಕಟಿಸುವ ಚಿಂತನೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ್ದು, ಅಧಿಕೃತ ಪ್ರಕಟಣೆ ಬಾಕಿ ಇದೆ. ಗಣಕೀಕೃತ ವ್ಯವಸ್ಥೆ ಆಧಾರದಲ್ಲಿ ದಿನಾಂಕದ ಪರಿಷ್ಕರಣೆ ಸಾಧ್ಯತೆ ಇದೆ ಎನ್ನಲಾಗಿದೆ.
ಮಾರ್ಚ್ 25 ರಿಂದ ಏಪ್ರಿಲ್ 6ರ ವರೆಗೆ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಮುಗಿದಿದೆ. ಫಲಿತಾಂಶದ ಕ್ರೋಢೀಕರಣದ ಕಾರ್ಯ ಅಂತಿಮ ಹಂತದಲ್ಲಿದೆ. ಅಂಕಗಳ ಅಂಕಿ-ಅಂಶಗಳನ್ನು ಗಣಕೀಕೃತ ವ್ಯವಸ್ಥೆಗೆ ದಾಖಲಿಸುವ ಕೆಲಸ ಪ್ರಗತಿಯಲ್ಲಿದೆ.
ಮೇ 8 ಅಥವಾ 10 ರಂದು ಫಲಿತಾಂಶ ಪ್ರಕಟಿಸಲು ಮಂಡಳಿ ಚಿಂತನೆ ನಡೆಸಿದೆ. ಸದ್ಯ ಇನ್ನೂ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ, ಫಲಿತಾಂಶ ಪ್ರಕಟಿಸುವ ಹಿಂದಿನ ದಿನ ಅಧಿಕೃತವಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಂಪ್ಯೂಟರ್ ಕೆಲಸದಲ್ಲಿ ವಿಳಂಬವಾದರೆ ಫಲಿತಾಂಶ ಪ್ರಕಟಿಸುವ ದಿನಾಂಕ ಬದಲಾಗುವ ಸಾಧ್ಯತೆ ಇದೆ. ಹಾಗಾಗಿ, ಇನ್ನೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಬಹುತೇಕ ಮೇ 10 ಅಥವಾ ಅದಕ್ಕೂ ಮೊದಲೇ ಫಲಿತಾಂಶ ಪ್ರಕಟ ಸಾಧ್ಯತೆ ಇದೆ. ಮೇ 7 ರಂದು ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ ಇರುವ ಕಾರಣ ಮೇ 8 ಅಥವಾ 10 ಕ್ಕೆ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಡಬಹುದು. ಪರೀಕ್ಷಾ ಪ್ರವೇಶ ಪತ್ರದಲ್ಲಿ ನೀಡಿರುವ ರಿಜಿಸ್ಟರ್ ನಂಬರ್ (ನೋಂದಣಿ ಸಂಖ್ಯೆ) ಮೂಲಕ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದು. kseab.karnataka.gov.in ಗೆ ಭೇಟಿ ಫಲಿತಾಂಶ ಪಡೆಯಬಹುದಾಗಿದೆ.
ಇದನ್ನೂ ಓದಿ: ಯುಜಿಸಿಇಟಿ-24 ಕೀ ಉತ್ತರ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಮೇ 7ರವರೆಗೆ ಕಾಲಾವಕಾಶ - UGCET Answer Key