ಬೆಂಗಳೂರು: ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಸಂಜೆ ನಡೆಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯ ವೀಕ್ಷಿಸಲು ಆಗಮಿಸುವವರ ಅನುಕೂಲಕ್ಕಾಗಿ ನಮ್ಮ ಮೆಟ್ರೋದಿಂದ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲಾ ನಾಲ್ಕು ಟರ್ಮಿನಲ್ಗಳ ಮೆಟ್ರೋ ನಿಲ್ದಾಣಗಳಿಂದಲೂ ಕೊನೆಯ ರೈಲು ಸೇವೆಯನ್ನು ರಾತ್ರಿ 11.30ಕ್ಕೆ ವಿಸ್ತರಿಸಲಾಗಿದೆ.
ಪೇಪರ್ ಟಿಕೆಟ್ ಮಾರಾಟ: ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಇಂದು ಮಧ್ಯಾಹ್ನ 2 ಗಂಟೆಯಿಂದಲೇ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು 50 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದು ಕಬ್ಬನ್ಪಾರ್ಕ್ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ಒಂದೇ ಪ್ರಯಾಣಕ್ಕೆ ವಿತರಣೆಯ ದಿನದಂದು ರಾತ್ರಿ 8 ಗಂಟೆಯಿಂದ ದಿನದ ಸೇವೆಯು ಕೊನೆಗೊಳ್ಳುವವರೆಗೆ ಮಾನ್ಯವಾಗಿರಲಿದೆ. ಈ ನಿಲ್ದಾಣಗಳಲ್ಲಿ ಟೋಕನ್ ಲಭ್ಯವಿಲ್ಲ.
ಆದರೆ, ಈ ಎರಡು ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್ ಮತ್ತು ಎನ್‌ಸಿಎಂಸಿ ಕಾರ್ಡ್‌ಗಳನ್ನು ಬಳಸಬಹುದು. ವಾಟ್ಸ್ ಆ್ಯಪ್/ನಮ್ಮ ಮೆಟ್ರೋ ಆ್ಯಪ್/ಪೇಟಿಎಂ ಮೂಲಕ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಕಬ್ಬನ್ಪಾರ್ಕ್ ಮತ್ತು ಎಂ.ಜಿ. ರೋಡ್ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಸುವಾಗ ಕೌಂಟರ್‌ಗಳಲ್ಲಿ ಜನಸಂದಣಿ ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ.
ಬಿಎಂಟಿಸಿ ಬಸ್ ಅವಧಿ ವಿಸ್ತರಣೆ: ಐಪಿಎಲ್ ಕ್ರಿಕೆಟ್ ಪ್ರೇಮಿಗಳಿಗೆ ನೆರವಾಗುವ ದೃಷ್ಟಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 4, 12 ಮತ್ತು 18ರಂದು ನಡೆಯುವ ಪಂದ್ಯಗಳಿಗೆ ಬಿಎಂಟಿಸಿ ಬಸ್ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಎಲ್ಲ ಪಂದ್ಯದ ವೇಳೆ ಬರುವುದು ಹಾಗೂ ಹೋಗುವ ಎರಡೂ ಅವಧಿಯಲ್ಲೂ ಹೆಚ್ಚುವರಿ ಬಿಎಂಟಿಸಿ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ನಗರದ ಎಲ್ಲ ನಿಲ್ದಾಣಗಳಿಂದಲೂ ರಾತ್ರಿ ಒಂದು ಗಂಟೆವರೆಗೂ ಬಿಎಂಟಿಸಿ ಸೇವೆ ಇರಲಿದೆ.
ಸೇವೆ ವಿಸ್ತರಿಸಿದ ಮಾರ್ಗಗಳು:
ಚಿನ್ನಸ್ವಾಮಿ ಕ್ರೀಡಾಂಗಣ - ಕಾಡುಗೋಡಿ ಮಾರ್ಗ - ಹೆಚ್ಎಎಲ್ ರೋಡ್
ಚಿನ್ನಸ್ವಾಮಿ ಸ್ಟೇಡಿಯಂ - ಕಾಡುಗೋಡಿ ಮಾರ್ಗ - ಹೂಡಿ ರಸ್ತೆ
ಚಿನ್ನಸ್ವಾಮಿ ಕ್ರೀಡಾಂಗಣ - ಸರ್ಜಾಪುರ ಮಾರ್ಗ - ಅಗರ ದೊಮ್ಮಸಂದ್ರ
ಚಿನ್ನಸ್ವಾಮಿ ಸ್ಟೇಡಿಯಂ - ಎಲೆಕ್ಟ್ರಾನಿಕ್ ಸಿಟಿ ಮಾರ್ಗ - ಹೊಸೂರು ರಸ್ತೆ
ಚಿನ್ನಸ್ವಾಮಿ ಸ್ಟೇಡಿಯಂ - ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಮಾರ್ಗ - ಜಯದೇವ ಆಸ್ಪತ್ರೆ
ಚಿನ್ನಸ್ವಾಮಿ ಕ್ರೀಡಾಂಗಣ - ಹೆಚ್ಬಿ ಕ್ವಾಟ್ರರ್ಸ್ ಮಾರ್ಗ - ಎಂಸಿಟಿಸಿ ನಾಯಂಡಹಳ್ಳಿ
ಚಿನ್ನಸ್ವಾಮಿ ಸ್ಟೇಡಿಯಂ - ನೆಲಮಂಗಲ ಮಾರ್ಗ - ಯಶವಂತಪುರ
ಚಿನ್ನಸ್ವಾಮಿ ಕ್ರೀಡಾಂಗಣ - ಜನಪ್ರಿಯ ಟೌನ್ಶಿಪ್ ಮಾರ್ಗ - ಮಾಗಡಿ ರೋಡ್
ಚಿನ್ನಸ್ವಾಮಿ ಸ್ಟೇಡಿಯಂ - ಯಲಹಂಕ 5ನೇ ಹಂತ ಮಾರ್ಗ - ಹೆಬ್ಬಾಳ
ಚಿನ್ನಸ್ವಾಮಿ ಕ್ರೀಡಾಂಗಣ - ಹೆಗ್ಗಡೆ ನಗರ, ಯಲಹಂಕ ಮಾರ್ಗ - ನಾಗವಾರ ಟ್ಯಾನರಿ ರೋಡ್
ಚಿನ್ನಸ್ವಾಮಿ ಸ್ಟೇಡಿಯಂ - ಬಾಗಲೂರು ಮಾರ್ಗ - ಹೆಣ್ಣೂರು ರಸ್ತೆ
ಚಿನ್ನಸ್ವಾಮಿ ಕ್ರೀಡಾಂಗಣ - ಹೊಸಕೋಟೆ ಮಾರ್ಗ - ಟಿನ್ ಫ್ಯಾಕ್ಟರಿ