ಬೆಂಗಳೂರು: ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ, ಮಾಜಿ ಶಾಸಕಿ ಸೌಮ್ಯ ರೆಡ್ಡಿ ಅವರನ್ನು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಈ ಸಂಬಂಧ ಎಐಸಿಸಿ ಆದೇಶ ಹೊರಡಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಸೌಮ್ಯ ರೆಡ್ಡಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಜೊತೆಗೆ ಚಂಡೀಗಡ ಮತ್ತು ಅರುಣಾಚಲ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ನೇಮಕವನ್ನು ಮಾಡಲಾಗಿದೆ. ಪುಷ್ಪಾ ಅಮರನಾಥ್ ಹಾಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದರು. ಇದೀಗ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸೌಮ್ಯಾ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ.
ಜಯನಗರ ಮಾಜಿ ಶಾಸಕಿ ಸೌಮ್ಯ ರೆಡ್ಡಿ 2024ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಸಚಿವ ರಾಮಲಿಂಗ ರೆಡ್ಡಿ ಪುತ್ರಿಯಾಗಿರುವ ಸೌಮ್ಯ ರೆಡ್ಡಿಗೆ ಇದೀಗ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಒಲಿದಿದೆ.
ಸೌಮ್ಯ ರೆಡ್ಡಿ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ಅವರು ರಾಜ್ಯದಲ್ಲಿ ಅಭ್ಯರ್ಥಿಯನ್ನು ಹುಡುಕುವ ಪ್ರಕ್ರಿಯೆ ಆರಂಭಿಸಿದ್ದರು. ಚರ್ಚೆಯ ವೇಳೆ ಕೃಪಾ ಅಮರ್ ಆಳ್ವ, ಕಮಲಾಕ್ಷಿ ರಾಜಣ್ಣ, ಐಶ್ವರ್ಯ ಮಹದೇವ್, ನಯನಾ ಮೋಟಮ್ಮ, ವೀಣಾ ಕಾಶಪ್ಪನವರ್ ಮತ್ತು ಕವಿತಾ ರೆಡ್ಡಿ ಹೆಸರು ಕೇಳಿಬಂದಿತ್ತು. ಅಂತಿಮವಾಗಿ ಹೈಕಮಾಂಡ್ ಸೌಮ್ಯ ರೆಡ್ಡಿಗೆ ಮಣೆ ಹಾಕಿದೆ.
ಹಾಲಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿರುವ ಪುಷ್ಪಾ ಅಮರನಾಥ್ ನವೆಂಬರ್ 2018ರಲ್ಲಿ ನೇಮಕವಾಗಿದ್ದರು. ಪುಷ್ಪಾ ಅವರು ರಾಜ್ಯ ದರ್ಜೆಯ ಸಚಿವರೊಂದಿಗೆ ರಾಜ್ಯಮಟ್ಟದ ಖಾತರಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರೂ ಆಗಿದ್ದಾರೆ.
ಇದನ್ನೂ ಓದಿ: ಭಾರತೀಯ ಆಹಾರ ನಿಗಮ ₹28 ರೂ.ಗೆ ಅಕ್ಕಿ ಕೊಡಲು ತೀರ್ಮಾನಿಸಿದೆ: ಸಚಿವ ಮುನಿಯಪ್ಪ - Minister Muniyappa