ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ವಿರೋಧಿಗಳು ಹಲವು ಗೊಂದಲಗಳನ್ನು ಸೃಷ್ಟಿ ಮಾಡಿದ್ದರು. ಆದರೆ, ಮತದಾರರು ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಜಾರಕಿಹೊಳಿ ಅವರನ್ನು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಮಂಗಳವಾರ ರಾತ್ರಿ ಚಿಕ್ಕೋಡಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಜನರ ಗೆಲುವಾಗಿದೆ, ಹೊರಗಿನವರು ಎಂದು ನಮ್ಮ ವಿರೋಧಿಗಳು ಅನಾವಶ್ಯಕ ಗೊಂದಲ ಮೂಡಿಸಿದರು. ಆದರೆ, ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಜನರ ಗೆಲುವಾಗಿದೆ, ನಮ್ಮ ಗ್ಯಾರಂಟಿ ಯೋಜನೆ ಒಳ್ಳೆಯ ಪರಿಣಾಮ ಬೀರಿದೆ, ಕೆಲವು ಕಡೆ ಗ್ಯಾರಂಟಿ ಯೋಜನೆ ವರ್ಕ್ ಆಗಿಲ್ಲ, ರಾಜ್ಯದಲ್ಲಿ ಘಟಾನುಘಟಿ ನಾಯಕರು ಸೋತಿದ್ದಾರೆ ಎಂದು ಹೇಳಿದರು.
ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಶಾಸಕ ಸವದಿ ಕ್ಷೇತ್ರವಾದ ಅಥಣಿಯಲ್ಲಿ ನಮ್ಮ ಅಭ್ಯರ್ಥಿಗೆ ಹೆಚ್ಚಿನ ಮತ ಬಂದಿಲ್ಲ. ಅಥಣಿಯಲ್ಲಿ ಸುಮಾರು ಏಳು ಸಾವಿರ ಮತಗಳು ಹಿನ್ನಡೆಯಾಗಿದೆ, ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸುವ ನಿರೀಕ್ಷೆ ಇತ್ತು. ಆದರೆ ನಮ್ಮವರೇ ಮೊಸ ಮಾಡಿದ್ದಾರೆ. ಕುಡಚಿ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮನ್ನವರ್ ತಮ್ಮ ಸಂಬಂಧಿಕ ಸ್ವತಂತ್ರ ಅಭ್ಯರ್ಥಿ ಶಂಭೂ ಕಲ್ಲೋಳ್ಕರ್ ಪರವಾಗಿ ಕೆಲಸ ಮಾಡಿದ್ದರಿಂದ ನಾವು ಹೈಕಮಾಂಡ್ಗೆ ದೂರು ನಿಡುತ್ತೇವೆ. ನಮ್ಮವರೇ ನಮಗೆ ವಿರೋಧ ಮಾಡಿದ್ದರಿಂದ ಒಂದು ಲಕ್ಷ ಮತಗಳ ಹಿನ್ನಡೆಯಾಗಿದೆ. ಮುಂದಿನ ಬಾರಿ ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಸೋಲಿಗೆ ಪ್ರತಿಕ್ರಿಯಿಸಿ, ಅವರ ಸೋಲಿಗೆ ಹಲವು ಕಾರಣಗಳು ಇವೆ. ಸ್ಥಳೀಯ ರಾಜಕಾರಣ, ಮರಾಠ ಮತದಾರರು, ಅವರು ಸಮುದಾಯದ ಮತ ಸೇರಿದಂತೆ ಹಲವು ಗೊಂದಲಗಳು ಇದ್ದವು. ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ, ಈ ಕುರಿತು ಪೊಲೀಸರು ತನಿಖೆ ಮಾಡುತ್ತಾರೆ, ಸದ್ಯ ಆರೋಪಿಯನ್ನು ಬಂಧನ ಮಾಡಿದ್ದಾರೆ, ದೇಶ ವಿರೋಧಿ ಘೋಷಣೆ ಯಾರೆ ಕೂಗಿದರು ಅದು ತಪ್ಪು. ನಾವು ಖಂಡನೆ ವ್ಯಕ್ತಪಡಿಸುತ್ತೇವೆ ಎಂದರು.
ಇದನ್ನೂ ಓದಿ: ದಿಂಗಾಲೇಶ್ವರ ಶ್ರೀಗಳ ಆಶೀರ್ವಾದದಿಂದ ನಾನು ಗೆದ್ದಿದ್ದೇನೆ : ಪ್ರಹ್ಲಾದ್ ಜೋಶಿ - Pralhad Joshi