ದಾವಣಗೆರೆ: ಕಂದಾಯ ಬಾಕಿ ಪಾವತಿಗೆ ರಿಯಾಯಿತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಇಬ್ಬರು ಕಂದಾಯ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಹರಿಹರ ನಗರಸಭೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ನಾಗೇಶ್, ಕಂದಾಯ ಅಧಿಕಾರಿ ರಮೇಶ್ ಬಂಧಿತ ಅಧಿಕಾರಿಗಳು.
ಹರಿಹರ ನಗರದ ಹೊರವಲಯದ ಶ್ರೀದೇವಿ ಪೆಟ್ರೋಲ್ ಬಂಕ್ ನಿವೇಶನದ ಕಂದಾಯವನ್ನು ಮಾಲೀಕ ಸುಮಾರು 3-4 ವರ್ಷಗಳಿಂದ ಪಾವತಿಸದೇ ಬಾಕಿ ಇರಿಸಿಕೊಂಡಿದ್ದರು. ನಿವೇಶನದ ಕಂದಾಯ 1,39,400ರಲ್ಲಿ ಪಾವತಿ ಕಡಿಮೆ ಮಾಡಲು ಉಳಿದ ಹಣದಲ್ಲಿ ಶೇಕಡಾ 50ರಷ್ಟು ಹಣ ನೀಡುವಂತೆ ಅಧಿಕಾರಿಗಳು ಲಂಚ ಕೇಳಿದ್ದರು.
ಸುಮಾರು 50-60 ಸಾವಿರ ರೂ ನೀಡುವಂತೆ ಬೇಡಿಕೆ ಇಟ್ಟಿದ್ದರು. ಹೀಗಾಗಿ, ಹಾವೇರಿ ಜಿಲ್ಲೆ ರಾಣೆಬೆನ್ನೂರು ಮೂಲದ ರಾಜು ಲಕ್ಷ್ಮಣ್ ಕಾಂಬ್ಳೆ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರುದಾರರಿಂದ 20,000 ರೂ. ಹಣ ಸ್ವೀಕರಿಸುವ ವೇಳೆ ಟ್ರ್ಯಾಪ್ ಕಾರ್ಯಾಚರಣೆ ಮೂಲಕ ಅಧಿಕಾರಿಗಳನ್ನು ಖೆಡ್ಡಾಕ್ಕೆ ಬೀಳಿಸುವಲ್ಲಿ ಲೋಕಾಯುಕ್ತ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಅಧಿಕಾರಿಗಳಾದ ನಾಗೇಶ್ ಮತ್ತು ರಮೇಶ್ ಎಂಬವರನ್ನು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ.
ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪೂರೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಇದನ್ನೂ ಓದಿ: ಚಾಮರಾಜನಗರ: ಕೆರೆ ಅಭಿವೃದ್ಧಿಗೆ ಲಂಚ, ಆರ್ಎಫ್ಒ ಲೋಕಾಯುಕ್ತ ಬಲೆಗೆ