ಬೆಂಗಳೂರು: ಆನ್‌ಲೈನ್ ಗೇಮ್ ವ್ಯಾಮೋಹಕ್ಕೆ ಬಿದ್ದ ಅಪ್ರಾಪ್ತನನ್ನ ಬೆದರಿಸಿ ಆತನಿಂದ ಲಕ್ಷಾಂತರ ರೂಪಾಯಿ ಚಿನ್ನಾಭರಣ ಸುಲಿಗೆ ಮಾಡಿದ ಆರೋಪದಡಿ ಇಬ್ಬರು ಬಾಲಕರು ಹಾಗೂ ನಾಲ್ವರು ಆರೋಪಿತರನ್ನ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರ್.ಆರ್. ನಗರದ ಐಡಿಯಲ್ ಹೋಮ್ ನಿವಾಸಿ ತಿರುಮಲ ಎಂಬುವರು ನೀಡಿದ ದೂರಿನ ಮೇರೆಗೆ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದವರನ್ನ ವಶಕ್ಕೆ ಪಡೆದುಕೊಂಡರೆ, ಗಂಗಾವತಿ ಮೂಲದ ಕಾರ್ತಿಕ್, ಸುನೀಲ್ ಹಾಗೂ ನಗರದ ನಿವಾಸಿಗಳಾದ ವೆಮನ್ ಹಾಗೂ ವಿವೇಕ್ ಎಂಬುವರನ್ನು ಬಂಧಿಸಲಾಗಿದೆ. ಬಂಧಿತರಿಂದ 302 ಗ್ರಾಂ ಚಿನ್ನದ ಗಟ್ಟಿ ಹಾಗೂ 23 ಲಕ್ಷದ ನಗದನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ದೂರುದಾರರ ಮಗ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದು, ಈತನಿಗೆ ಪೋಷಕರು ಮೊಬೈಲ್ ಕೊಡಿಸಿದ್ದರು. ಸದಾ ಪಬ್ ಜೀ, ಡ್ರೀಮ್ 11 ಸೇರಿದಂತೆ ವಿವಿಧ ಆನ್‌ಲೈನ್ ಗೇಮ್ ಆಡುವುದನ್ನ ಚಟವಾಗಿ ಬೆಳೆಸಿಕೊಂಡಿದ್ದ. ಈತನ ವೀಕ್ನೆಸ್ ಅರಿತುಕೊಂಡ ಇಬ್ಬರು ಅಪ್ರಾಪ್ತರು ಗೇಮ್ ಆಡುವುದರ ಬಗ್ಗೆ ಪೋಷಕರಿಗೆ ತಿಳಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದರು. ಭೀತಿಗೊಳಗಾದ ಬಾಲಕನಿಗೆ ಹಣ ಕೊಡುವಂತೆ ಒತ್ತಾಯಿಸಿದ್ದರು. ಹಣ ಇಲ್ಲದಿದ್ದಕ್ಕೆ ಮನೆಯಲ್ಲಿ ಚಿನ್ನಾಭರಣ ತಂದುಕೊಡುವಂತೆ ಒತ್ತಡ ಹೇರಿದ್ದರು. ಸ್ನೇಹಿತರ ಸೂಚನೆಯಂತೆ ಮನೆಯಲ್ಲಿದ್ದ 600ರಿಂದ 700 ಗ್ರಾಂ ಚಿನ್ನಾಭರಣಗಳನ್ನ ಕಾನೂನು ಸಂಘರ್ಷಕ್ಕೊಳಗಾದ ಬಾಲಕರಿಗೆ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತರಿಂದ ಚಿನ್ನ ಪಡೆದು ಪುಡಿಗಾಸು ಕೊಟ್ಟ ಆರೋಪಿಗಳು: ಬಾಲಕನಿಂದ ಹಣ ಪಡೆದ ಅಪ್ರಾಪ್ತರಿಬ್ಬರು ಪರಿಚಯಸ್ಥ ಆರೋಪಿಗಳಿಗೆ ಚಿನ್ನಾಭರಣ ನೀಡಿದ್ದರು. ಪ್ರತಿಯಾಗಿ ಪುಡಿಗಾಸು ನೀಡಿ ಅವರಿಂದ ನಾಲ್ವರು ಆರೋಪಿಗಳು ಚಿನ್ನ ಪಡೆದಿದ್ದರು. ವ್ಯವಸ್ಥಿತ ಸಂಚು ರೂಪಿಸಿ ಒಡವೆಗಳನ್ನ ಕರಗಿಸಿ ಚಿನ್ನದ ಗಟ್ಟಿ ಮಾಡಿಸಿಕೊಂಡಿದ್ದರು. ಈ ಸಂಬಂಧ ಬಾಲಕನ ತಂದೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಆರ್.ಆರ್. ನಗರ ಪೊಲೀಸರು ಇಬ್ಬರು ಅಪ್ರಾಪ್ತರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾಲ್ವರಿಗೆ ಚಿನ್ನವನ್ನ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ಈ ಮಾಹಿತಿ ಆಧರಿಸಿ ಗಂಗಾವತಿ ಮೂಲದ ಇಬ್ಬರು ಹಾಗೂ ಕೆಂಗೇರಿಯಲ್ಲಿ ವಾಸವಾಗಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿ ಕರಗಿಸಿದ ಚಿನ್ನದ ಗಟ್ಟಿಯನ್ನ ವಶಕ್ಕೆ ಪಡೆದುಕೊಂಡು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.