ಬೆಂಗಳೂರು: ಬುಧವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ರಾಜ್ಯಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಈ ಸಂಬಂಧ ಆಪರೇಷನ್ ಭೀತಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನೆಲ್ಲಾ ಶಾಸಕರನ್ನು ಹೋಟೆಲ್ಗೆ ಕರೆದೊಯ್ದಿದೆ. ಯಾವುದೇ ರೀತಿಯ ಅಡ್ಡ ಮತದಾನ ನಡೆಯದಂತೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ರಾಜ್ಯ ಕಾಂಗ್ರೆಸ್ ನಾಯಕರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕರಿಗೆ ರಾಜ್ಯಸಭೆ ಚುನಾವಣೆ ಮತದಾನದ ತರಬೇತಿ ಹಾಗೂ ಅಣಕು ಮತದಾನ ಮಾಡಿಸಲಾಯಿತು.
![ರಾಜ್ಯಸಭೆ ಚುನಾವಣೆ](https://etvbharatimages.akamaized.net/etvbharat/prod-images/26-02-2024/20848851_.jpg)
ಹೊಟೇಲ್ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮತದಾನದ ಬಗ್ಗೆ ಸಿಎಂ, ಡಿಸಿಎಂ ಶಾಸಕರಿಗೆ ಕಿವಿಮಾತು ಹೇಳಿದರು. ಯಾವ ರೀತಿ ಮತ ಹಾಕಬೇಕು. ಮೂವರು ಕೈ ಅಭ್ಯರ್ಥಿಗಳ ಪೈಕಿ ಯಾರು ಯಾರಿಗೆ ಮತ ಹಾಕಬೇಕು ಎಂಬುದರ ಬಗ್ಗೆ ತಿಳಿಸಲಾಯಿತು. ಮತ ಅಸಿಂಧುವಾಗದಂತೆ ಎಚ್ಚರಿಕೆ ವಹಿಸುವಂತೆಯೂ ಸೂಚನೆ ನೀಡಲಾಯಿತು. ಕಾಂಗ್ರೆಸ್ ಶಾಸಕರಲ್ಲಿ ಹಲವರು ಮೊದಲ ಬಾರಿಗೆ ಶಾಸಕರಾಗಿದ್ದು, ಅವರಿಗೆ ರಾಜ್ಯಸಭೆ ಚುನಾವಣೆಯ ಪ್ರಕ್ರಿಯೆ, ಮತದಾನ ವಿಧಾನದ ಬಗ್ಗೆ ತಿಳಿ ಹೇಳಲಾಯಿತು. ಯಾವುದೇ ಗೊಂದಲ ಇಲ್ಲದೇ ಮತದಾನ ಮಾಡುವಂತೆ ಎಚ್ಚರಿಕೆ ನೀಡಲಾಯಿತು.
ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕರಿಗೆ ರಾಜ್ಯಸಭೆ ಚುನಾವಣೆ ಮತದಾನದ ತರಬೇತಿ ಹಾಗೂ ಅಣಕು ಮತದಾನ ಮಾಡಿಸಲಾಯಿತು. ಅಣಕು ಮತದಾನ ನಡೆಸಿ, ಮಂಗಳವಾರ ಹೋಟೆಲ್ನಿಂದ ನೇರವಾಗಿ ವಿಧಾನಸೌಧಕ್ಕೆ ತೆರಳಿ ನಮ್ಮ ಶಾಸಕರು ಮತದಾನ ಮಾಡಲಿದ್ದಾರೆ ಎಂದು ತಿಳಿಸಿದರು.
ಮತದಾನದ ವೇಳೆ ಅಡ್ಡ ಮತದಾನ ನಡೆಯಲಿದೆಯೇ ಎಂಬ ಪ್ರಶ್ನೆಗೆ, ನಮ್ಮ ಕಡೆಯಿಂದ ಯಾವುದೇ ಅಡ್ಡ ಮತದಾನ ನಡೆಯುವುದಿಲ್ಲ ಎಂದರು.
![ರಾಜ್ಯಸಭೆ ಚುನಾವಣೆ](https://etvbharatimages.akamaized.net/etvbharat/prod-images/26-02-2024/20848851_.jpg)
ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿಯ ಹೋಟೆಲ್‌ನಲ್ಲಿ ಸೋಮವಾರ ರಾತ್ರಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಸಚಿವರಾದ ಹೆಚ್.ಕೆ.ಪಾಟೀಲ್, ಡಾ.ಜಿ.ಪರಮೇಶ್ವರ, ಕೆ.ಜೆ.ಜಾರ್ಜ್, ಕೆ.ಹೆಚ್.ಮುನಿಯಪ್ಪ, ದಿನೇಶ್ ಗುಂಡೂರಾವ್, ಆರ್.ವಿ.ದೇಶಪಾಂಡೆ, ಬೋಸರಾಜ್, ರಾಜ್ಯಸಭೆ ಚುನಾವಣೆ ಅಭ್ಯರ್ಥಿ ಅಜಯ್ ಮಾಕನ್, ಎಲ್ಲ ಶಾಸಕರು, ಎಂಎಲ್ಸಿಗಳು, ಸಂಸದರು, ಪದಾಧಿಕಾರಿಗಳು ಇದ್ದರು.