ಬೆಂಗಳೂರು/ಕಲಬುರಗಿ : ಪಿಎಸ್ಐ ನೇಮಕಾತಿ ಅಕ್ರಮ ಹಗರಣದಲ್ಲಿ ಮತ್ತೆ ಮೂವರು ಆರೋಪಿಗಳನ್ನ ಕಲಬುರಗಿಯಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಷಹಾಬಾದ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದ ಚಂದ್ರಕಾಂತ್ ಪ್ಯಾಟಿ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಶಶಿಧರ್ ಹಾಗೂ ಅಫ್ಜಲಪುರದ ಹಾಸ್ಟೆಲ್ ವಾರ್ಡನ್ ಬಸವರಾಜ್ ಸಿದ್ದರಾಮಪ್ಪ ಎಂಬುವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಆರ್.ಡಿ ಪಾಟೀಲ್ ಜೊತೆ ಸಂಪರ್ಕವಿದ್ದ ಆರೋಪಿಗಳು, ಪರೀಕ್ಷಾ ಅಭ್ಯರ್ಥಿಗಳಿಗೆ ಬ್ಲೂಟೂತ್ ಮೂಲಕ ಉತ್ತರ ಹೇಳಿದ್ದ ಆರೋಪವಿದೆ. ಆರೋಪಿಗಳ ವಿರುದ್ಧ ಕಲಬುರಗಿಯ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶನಿವಾರ ಮಧ್ಯಾಹ್ನ ಕಲಬುರಗಿಯಲ್ಲಿ ಮೂವರನ್ನೂ ಬಂಧಿಸಿರುವ ಸಿಐಡಿ ಪೊಲೀಸರು ವಿಚಾರಣೆಗೊಳಪಡಿಸಿದ ಬಳಿಕ ಕಲಬುರಗಿ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: ಮುಂದಿನ ಪಿಎಸ್ಐ ಪರೀಕ್ಷೆ ಕೆಇಎಗೆ ವಹಿಸಲು ಚಿಂತನೆ: ಗೃಹ ಸಚಿವ ಡಾ. ಜಿ.ಪರಮೇಶ್ವರ್