ಬಳ್ಳಾರಿ: ಸಂಡೂರಿನ ನಾರಿಹಳ್ಳ ಕಿರು ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಅದೇ ಮಾರ್ಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಭೂ ಸಂತ್ರಸ್ತ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಬನ್ನಿಹಟ್ಟಿ ಕ್ರಾಸ್ ಬಳಿ ಪ್ರತಿಭಟನೆ ನಡೆಯುತ್ತಿತ್ತು. ಜಿಂದಾಲ್ ಏರ್ಪೋರ್ಟ್ನಿಂದ ಸಂಡೂರಿಗೆ ಹೋಗುವ ಮಾರ್ಗ ಇದಾಗಿದೆ. ಬಗರ್ ಹುಕುಂ ಇನಾಂ ಭೂಮಿಗಳಲ್ಲಿ ಸಾಗುವಳಿ ಮಾಡುವವರಿಗೆ ಹಕ್ಕು ಪತ್ರ ನೀಡಬೇಕು. ಜಿಂದಾಲ್ ಸಂಸ್ಥೆಗೆ ನೀಡಿದ 3,667 ಎಕರೆ ಜಮೀನು ಮಂಜೂರಾತಿ ರದ್ದುಪಡಿಸಬೇಕು. ಕುಡತಿನಿ ಭೂ ಸಂತ್ರಸ್ತರಿಗೆ ಪರಿಹಾರ ಕೊಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಜನರು ಪ್ರತಿಭಟನೆಗೆ ಮುಂದಾಗಿದ್ದರು.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲು ಬನ್ನಿಹಟ್ಟಿ ಕ್ರಾಸ್ ಬಳಿ ನಿಂತಿದ್ದ ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು, ಕುಡುತಿನಿ ಠಾಣೆಗೆ ಕರೆದೊಯ್ದರು.
ಕಿರು ಜಲಾಶಯ ಸಿಂಗಾರ: ನಾರಿಹಳ್ಳ ಕಿರು ಜಲಾಶಯಕ್ಕೆ ಸಿಎಂರಿಂದ ಬಾಗಿನ ಅರ್ಪಣೆ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. 0.810 ಟಿಎಂಸಿ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜಲಾಶಯವನ್ನು 1972ರಲ್ಲಿ ಲೋಕಾರ್ಪಣೆ ಮಾಡಲಾಗಿತ್ತು. ಆಗಿನ ಸಿಎಂ ದೇವರಾಜ ಅರಸು ಜಲಾಶಯವನ್ನು ಉದ್ಘಾಟಿಸಿದ್ದರು. 615 ಕಿ.ಮೀ ವಿಸ್ತೀರ್ಣ ಹೊಂದಿರುವ ಡ್ಯಾಂ ಸಂಡೂರು ಪಟ್ಟಣ ಸೇರಿ ವಿವಿಧ ಗ್ರಾಮ ಕುಡಿಯುವ ನೀರಿಗೆ ಆಧಾರವಾಗಿದೆ. ಐದು ಕ್ರಸ್ಟ್ ಗೇಟ್‌ಗಳನ್ನು ಹೊಂದಿದೆ. ಜಲಾಶಯಕ್ಕೆ ನಿತ್ಯ ನೂರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದರು. ಸಿಎಂ ಆಗಮಿಸುವ ಹಿನ್ನೆಲೆಯಲ್ಲಿ ಇಂದು ಯಾರನ್ನೂ ಬಿಡುತ್ತಿಲ್ಲ.
ಕೋತಿಗಳ ಕಾಟ: ನಿತ್ಯ ಜಲಾಶಯದ ಬಳಿ ನೂರಾರು ಸಂಖ್ಯೆಯಲ್ಲಿ ಕೋತಿಗಳು ಜಮಾಯಿಸುತ್ತವೆ. ಇವತ್ತು ಕೂಡ ಕೋತಿಗಳು ಸೇರಿದ್ದು, ಪೆಂಡಾಲ್ನಲ್ಲಿ ಬಾಗಿನ ಅರ್ಪಣೆ ಸಾಮಗ್ರಿಗಳನ್ನು ಹಾಳು ಮಾಡುತ್ತವೆ ಎಂದು ಪಟಾಕಿ ಸಿಡಿಸಿ ಅವುಗಳನ್ನು ಓಡಿಸುತ್ತಿರುವುದು ಕಂಡುಬಂತು.
ಇದನ್ನೂ ಓದಿ: ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣಗಳ ಬಗ್ಗೆಯೂ ಪರಿಶೀಲಿಸುತ್ತೇವೆ: ಗೃಹ ಸಚಿವ ಪರಮೇಶ್ವರ್