ಚಿಕ್ಕಮಗಳೂರು : ಜನ ಪ್ರತಿನಿಧಿಗಳಿಗೆ ಇಚ್ಛಾಶಕ್ತಿಯ ಕೊರತೆ ಹಾಗೂ ಕೆಲಸ ಮಾಡದ ಆಸಕ್ತಿ ಇಲ್ಲದಿದ್ದರೆ, ಈ ರೀತಿಯ ಘಟನೆಗಳು ಸಮಾಜದಲ್ಲಿ ನಡೆಯುತ್ತಲೇ ಇರುತ್ತವೆ. ಇತ್ತ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ತಲೆ ಕೆಡಿಸಿ ಕೊಳ್ಳುತ್ತಿಲ್ಲ. ಜನಪ್ರತಿನಿಧಿಗಳಂತೂ ಈ ಕಡೆ ತಲೆ ಹಾಕುತ್ತಿಲ್ಲ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಲೆನಾಡು ಭಾಗದಲ್ಲಿ ನೂರಾರು ಅವಾಂತರಗಳು ಸೃಷ್ಟಿಯಾದರೆ, ಗ್ರಾಮಾಂತರ ಭಾಗದಲ್ಲಿ ಬೇರೆ ರೀತಿಯ ಸಮಸ್ಯೆಗಳೆ ಉದ್ಭವವಾಗುತ್ತಿವೆ.
ಪ್ರತಿ ನಿತ್ಯ ಸಾವಿರಾರು ಜನರು ಬಂದು ಹೋಗುವ ಸರ್ಕಾರಿ ಬಸ್ ನಿಲ್ದಾಣ ಕೆಸರು ಗದ್ದೆಯಂತಾಗಿದ್ದು, ಈ ನಿಲ್ದಾಣದ ಒಳಗೆ ಹಾಗೂ ಹೊರಗೆ ಬರುವುದಕ್ಕೆ ಜನರು ಪ್ರತಿ ನಿತ್ಯ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಅದೆಷ್ಟೋ ಜನರು ಈ ಕೆಸರು ಗದ್ದೆಯಲ್ಲಿ ನಡೆಯಲು ಸಾಧ್ಯವಾಗದೆ ಬಿದ್ದು ಗಾಯ ಮಾಡಿಕೊಂಡ ಉದಾರಣೆಯು ಸಾಕಷ್ಟು ಇದೆ. ಬಸ್ ನಿಲ್ದಾಣದ ಆವರಣ ಸರಿ ಮಾಡಿ ಎಂದು ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಗಮನಕ್ಕೆ ತಂದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಸ್ಥಳೀಯ ಜನರು ಹಾಗೂ ಕೆಲ ಸಂಘಟನೆಯ ಜನರು ವಿನೂತನವಾಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕೆಲ ಸಂಘಟನೆಗಳು ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಭತ್ತದ ನಾಟಿ ಮಾಡಿದ್ದಾರೆ. ವಿಶೇಷವೆಂದ್ರೆ ಕೆಸರು ಗದ್ದೆಯಾಂತದ ಬಸ್ ನಿಲ್ದಾಣದಲ್ಲಿ ಜೋಡೆತ್ತು ಮೂಲಕ ಉಳುಮೆ ಮಾಡಿ ಪ್ರತಿಭಟನೆ ಮಾಡಿರುವುದು ಗಮನ ಸೆಳೆಯಿತು. ಬಸ್ ನಿಲ್ದಾಣದ ದುಸ್ಥಿತಿ ನೋಡಲಾಗದೆ ಸಾರ್ವಜನಿಕರು ಹೋರಾಟಕ್ಕೆ ಇಳಿದಿದ್ದು, ಇಲ್ಲಿನ ಪರಿಸ್ಥಿತಿ ಸರಿ ಮಾಡದಿದ್ದರೆ ಬೇರೆ ರೀತಿಯ ಹೋರಾಟ ಮಾಡುವ ಎಚ್ಚರಿಕೆಯನ್ನು ಸ್ಥಳೀಯರು ಮತ್ತು ಕೆಲ ಸಂಘಟನೆಗಳು ನೀಡಿದ್ದಾರೆ.