ದಾವಣಗೆರೆ: ಇತ್ತೀಚೆಗೆ ನಡೆದ ಪೊಲೀಸರ ವಶದಲ್ಲಿದ್ದ ವ್ಯಕ್ತಿ ಸಾವು ಪ್ರಕರಣ ಖಂಡಿಸಿ ಆಕ್ರೋಶಗೊಂಡ ಜನರು ಚನ್ನಗಿರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಆಗ ಕೆಲವು ಕಿಡಿಗೇಡಿಗಳು 'ಪಾಕಿಸ್ತಾನ್ ಜಿಂದಾಬಾದ್' ಎಂದು ಕೂಗಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ.
''ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆಯ ಮುಂದೆ ನಡೆದ ಪ್ರತಿಭಟನೆಯ ವೇಳೆ ಕೆಲವು ಯುವಕರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ಬಗ್ಗೆ ಪೊಲೀಸರು ಪರಿಶೀಲಿಸಿದ್ದು, ಮೇಲ್ನೋಟಕ್ಕೆ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿರುವುದು ವಿಡಿಯೋದಲ್ಲಿ ಕಂಡುಬಂದಿಲ್ಲ'' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪೊಲೀಸರು ವಿಡಿಯೋ ಪರಿಶೀಲಿಸಿದಾಗ ಅದರಲ್ಲಿ 'ಪೊಲೀಸರಿಗೆ ಧಿಕ್ಕಾರ' ಎಂಬ ಘೋಷಣೆ ಕೂಗಿರುವುದು ಕಂಡುಬಂದಿದೆ ಎಂದು ಎಸ್ಪಿ ಕಚೇರಿ ಸ್ಪಷ್ಟನೆ ನೀಡಿದೆ. ಜೊತೆಗೆ, ಕಿಡಿಗೇಡಿಗಳು ಗಲಾಟೆ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರುವ ವಿಡಿಯೋ ಸಾರ್ವಜನಿಕರಿಗೆ ಲಭ್ಯವಿದ್ದರೆ ಜಿಲ್ಲಾ ಪೊಲೀಸ್ ಕಚೇರಿ ಅಥವಾ ಸ್ಥಳೀಯ ಠಾಣೆಗೆ ಮಾಹಿತಿ ನೀಡಿ ಎಂದು ಕೋರಲಾಗಿದೆ.
ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದರೆ, ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಬಾರದು ಎಂದು ದಾವಣಗೆರೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.