ದಾವಣಗೆರೆ: ಬೆಣ್ಣೆನಗರಿಯಲ್ಲಿ ಮದುವೆ ಮನೆಯಲ್ಲೂ ರಾಮ ನಾಮ ಜಪ ಕೇಳಿ ಬಂದಿದೆ. ಶ್ರೀ ರಾಮನ ಕಟೌಟ್ ಮುಂದೆಯೇ ನವ ಜೋಡಿಗಳು ದಾಂಪತ್ಯದ ಜೀವನಕ್ಕೆ ಕಾಲಿರಿಸಿದ್ದಾರೆ. ಶ್ರೀರಾಮ ಮಂದಿರ ಉದ್ಘಾಟನೆ ವಿಶೇಷ ದಿನವೇ ದಾಂಪತ್ಯಕ್ಕೆ ಜೋಡಿ ಕಾಲಿರಿಸಿರುವುದು ಕುಟುಂಬದ ಸಂತಸಕ್ಕೆ ಕಾರಣವಾಗಿದೆ. ಮದುವೆಯಾದ ನವ ದಂಪತಿ ಇಬ್ಬರು ಮುಹೂರ್ತ ಬಳಿಕ ಶ್ರೀ ರಾಮನ ಆಶೀರ್ವಾದ ಪಡೆದರು.
ದಾವಣಗೆರೆ ನಗರದಲ್ಲಿರುವ ಬಾಪೂಜಿ ಕಲ್ಯಾಣ ಮಂಟಪದಲ್ಲಿ ಈ ವಿಶೇಷ ಮದುವೆಯಾಗಿದ್ದು, ಮದುವೆ ಮನೆಯಲ್ಲೂ ರಾಮ ಮಂದಿರ ಉದ್ಘಾಟನೆ ಸಂಭ್ರಮ ಕಳೆಗಟ್ಟಿತ್ತು. ರಾಮ ಮಂದಿರ ಉದ್ಘಾಟನೆ ದಿನವೇ ಮದುವೆ ಇರುವುದಕ್ಕೆ ನವ ಜೋಡಿಗಳ ಸಂತಸಕ್ಕೆ ಕಾರಣವಾಗಿದೆ. ಮದುವೆ ಮಂಟಪದಲ್ಲಿ ಶ್ರೀರಾಮನ ಕಟೌಟ್ ಇರಿಸಿ ಮದುವೆ ಆಗಿರುವುದು ವಿಶೇಷ. ದಾವಣಗೆರೆಯ ರೋಹಿತ್, ಅರ್ಪಿತಾ ವಿವಾಹವಾದ ನವ ದಂಪತಿಯಾಗಿದ್ದಾರೆ.
ಮದುವೆ ಆದ ಬಳಿಕ ಅದೇ ಶ್ರೀ ರಾಮನ ಕಟೌಟ್ ಇರಿಸಿ ಪುಷ್ಪ ನಮನ ಸಲ್ಲಿಸಿದರು. ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆ ಶುಭದಿನದಂದೇ ವೈವಾಹಿಕ ಜೀವನಕ್ಕೆ ಕಾಲಿರಿಸಿರುವುದು ನಮ್ಮ ಸೌಭಾಗ್ಯವಾಗಿದೆ ಎಂದ ನವ ದಂಪತಿ ಅಭಿಪ್ರಾಯಪಟ್ಟಿದ್ದಾರೆ. ಬಳಿಕ ಜೈ ಶ್ರೀ ರಾಮ ಎಂದು ಘೋಷಣೆ ಕೂಗಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.
200ಕ್ಕೂ ಹೆಚ್ಚು ಭಕ್ತರಿಗೆ ಲಡ್ಡು ಹಂಚಿದ ರಾಮ ಭಕ್ತ: ಶ್ರೀರಾಮ ಮಂದಿರ ಉದ್ಘಾಟನೆ ಹಾಗು ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ನಗರದ ಪಿಜೆ ಬಡಾವಣೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಪ್ರಭು ಶ್ರೀರಾಮನಿಗೆ ವಿಶೇಷ ಅಲಂಕಾರ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಇನ್ನು ಶ್ರೀರಾಮನ ದರ್ಶನ ಪಡೆದ ರಾಮನ ಭಕ್ತರಿಗೆ ಲಡ್ಡು ಹಂಚಲಾಯಿತು. ಸರಿಸುಮಾರು 200ಕ್ಕೂ ಹೆಚ್ಚು ಜನ ಭಕ್ತರಿಗೆ ಮೋತಿ ಚೂರ್ ಲಡ್ಡು ಹಂಚಲಾಯಿತು. ಇದಲ್ಲದೇ ಸರಥಿ ಸಾಲಿನಲ್ಲಿ ಆಗಮಿಸಿದ ಭಕ್ತರು ರಾಮನ ದರ್ಶನ ಮಾಡಿ ಪುನೀತರಾದರು, ಕೆಲವರು ಜೈ ಶ್ರೀರಾಮ ಎಂದು ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದರು.
ರಾಮಮಂದಿರ ಉದ್ಘಾಟನೆ ಕಣ್ತುಂಬಿಕೊಳ್ಳಲು ಎಲ್ಇಡಿ ಪರದೆ ಅಳವಡಿಕೆ: ಅಯೋಧ್ಯೆ ಶ್ರೀರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಜನಸಾಮಾನ್ಯರು ವೀಕ್ಷಿಸಲು ಮಂದಿರದ ಆವರಣದಲ್ಲಿ ಭಕ್ತರು ಕಾರ್ಯಕ್ರಮ ವೀಕ್ಷಣೆ ಮಾಡಲು ಎಲ್ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ವೃದ್ಧರು, ಮಹಿಳೆಯರು, ಮಕ್ಕಳು ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಂಡರು. ದಾವಣಗೆರೆ ನಗರದ ವಿನೋಬ ನಗರ, ಪಿಜೆ ಬಡಾವಣೆ, ಕೆಬಿ ಬಡಾವಣೆ, ಬಂಬೂ ಬಜಾರ್, ಭರತ್ ಕಾಲೋನಿ, ಸೇರಿದಂತೆ ಸಾಕಷ್ಟು ಕಡೆ ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿತ್ತು. ಇನ್ನು ವಿನೋಭ ನಗರದಲ್ಲಿ ಇಂದು ದೀಪಾ ದೀಪಾವಳಿಯಂತೆ ಹಬ್ಬ ಆಚರಿಸಲು ಮಹಿಳೆಯರಿಗೆ ದೀಪವನ್ನು ವಿತರಣೆ ಮಾಡಲಾಯಿತು. ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಯಶಸ್ವಿಯಾಗಲಿ, ಯಾವುದೇ ವಿಘ್ನ ನಡೆಯಕೂಡದು ಎಂಬ ಉದ್ದೇಶದಿಂದ ತಾರಕ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ಕೋಟ್ಯಂತರ ಜನರ ಕನಸು ಸಾಕಾರ; ಅಯೋಧ್ಯೆದಲ್ಲಿ ಪ್ರತಿಷ್ಠಾಪನೆಯಾದ ಶ್ರೀರಾಮ