ಬೆಂಗಳೂರು: ಗುತ್ತಿಗೆ ನೌಕರರೊಂದಿಗೆ ಒಪ್ಪಂದ ಅಂತಿಮಗೊಳಿಸುವ ಮುನ್ನ ಸ್ವಾಭಾವಿಕ ನ್ಯಾಯದ ತತ್ವದಂತೆ ಅಹವಾಲುಗಳನ್ನು ಆಲಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಹೆಚ್‌ಎಎಲ್ ಸಲ್ಲಿಸಿದ್ದ ಮೇಲ್ಮನವಿ ಆಲಿಸಿದ ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ನ್ಯಾಯಮೂರ್ತಿ ಜಿ.ಬಸವರಾಜ ಅವರಿದ್ದ ವಿಭಾಗೀಯ ಪೀಠ ಬುಧವಾರ ಈ ಆದೇಶ ನೀಡಿತು.
ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದ ಕರ್ನಾಟಕ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್)ಗೆ ಕಾನೂನಿನ ಪ್ರಕಾರ ಸಮಗ್ರ ಒಪ್ಪಂದವನ್ನು ಪರಿಷ್ಕರಿಸಿ ಅದರ ಪ್ರತಿಯನ್ನು ಹೆಚ್‌ಎಎಲ್ ಗುತ್ತಿಗೆ ನೌಕರರ ಸಂಘಕ್ಕೆ ನೀಡುವಂತೆ ಆದೇಶಿಸಿದೆ. ಹೆಚ್‌ಎಎಲ್ ಸಂಸ್ಥೆ ಗುತ್ತಿಗೆ ಸಂಬಂಧದ ಒಪ್ಪಂದದ ಪ್ರಾಥಮಿಕ ಅಧಿಸೂಚನೆ ಹೊರಡಿಸಬೇಕು, ಬಾಧಿತರಾಗುವವರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು. ಆ ಆಕ್ಷೇಪಣೆ ಪರಿಗಣಿಸಿದ ನಂತರ ಅಂತಿಮ ಅಧಿಸೂಚನೆಗೆ ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶದಲ್ಲಿ ಸೂಚನೆ ನೀಡಿದೆ.
ಏಕ ಸದಸ್ಯ ಪೀಠದ ಆದೇಶದಲ್ಲಿ ಅಲ್ಪ ಮಾರ್ಪಾಟು ಮಾಡಿರುವ ವಿಭಾಗೀಯ ಪೀಠ, ಸಮಗ್ರ ಗುತ್ತಿಗೆ ಒಪ್ಪಂದವನ್ನು ಅಂತಿಮಗೊಳಿಸುವ ಮುನ್ನ ಗುತ್ತಿಗೆ ಕಾರ್ಮಿಕರಿಗೆ ಅಥವಾ ಪ್ರತಿವಾದಿ ಕಾರ್ಮಿಕರ ಒಕ್ಕೂಟಗಳ ಪ್ರತಿನಿಧಿಗಳಿಗೆ ತಮ್ಮ ಅಹವಾಲು ಹೇಳಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಹೆಚ್‌ಎಎಲ್ ಸಂಸ್ಥೆಗೆ ನಿರ್ದೇಶಿಸಿದೆ.
ಮೇಲ್ಮನವಿಯನ್ನು ವಿಲೇವಾರಿ ಮಾಡಿರುವ ನ್ಯಾಯಾಲಯ, ಗುತ್ತಿಗೆ ಕಾರ್ಮಿಕರ (ನಿಯಂತ್ರಣ ಮತ್ತು ನಿಷೇಧ) ಕಾಯಿದೆ 1970ರ ಅನ್ವಯ ಕೆಲವು ಕಠಿಣ ಸಂದರ್ಭಗಳಲ್ಲಿ ಮಾತ್ರ ಗುತ್ತಿಗೆ ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಹಾಗಾಗಿ ಗುತ್ತಿಗೆ ಅಂತಿಮಗೊಳಿಸುವ ಮುನ್ನ ಹೆಚ್‌ಎಎಲ್ ಸಂಸ್ಥೆ ಗುತ್ತಿಗೆ ಕಾರ್ಮಿಕರಿಗೆ ತಮ್ಮ ಅಹವಾಲು ಹೇಳಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂಬ ಏಕ ಸದಸ್ಯ ಪೀಠದ ಆದೇಶ ಸಮಂಜಸವಾಗಿದೆ ಎಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಹಿಂದೂಸ್ಥಾನ್ ಏರೋನಾಟಿಕ್ಸ್ ಸಂಸ್ಥೆ ಯುದ್ಧ ವಿಮಾನ, ಹೆಲಿಕಾಪ್ಟರ್, ರಕ್ಷ ಣಾ ಸಾಧನಗಳು ಸೇರಿದಂತೆ ವೈಮಾನಿಕ ವಲಯಕ್ಕೆ ಅಗತ್ಯವಾದ ಸಾಧನಗಳ ಉತ್ಪಾದನಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೇಂದ್ರ ಸರ್ಕಾರಿ ಒಡೆತನದ ಒಂದು ದೊಡ್ಡ ಉದ್ದಿಮೆಯಾಗಿದೆ. ಅದು ಹೆಚ್ಚಿನ ಬೇಡಿಕೆಗಳಿದ್ದಾಗ ನಾನ್ ಕೋರ್ ಕೆಲಸಗಳನ್ನು ಮಾಡಲು ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ನಿಯೋಜಿಸಿಕೊಳ್ಳಲಿದೆ. ಗುತ್ತಿಗೆ ಕಾರ್ಮಿಕರನ್ನು ಒಂದು ಕಂಪನಿಯ ಮೂಲಕ ನಿಯೋಜಿಸಿಕೊಳ್ಳಲಾಗುವುದು. ಆ ರೀತಿ ನಿಯೋಜನೆಗೊಂಡ ಕಾರ್ಮಿಕರು, ಗುತ್ತಿಗೆ ಒಪ್ಪಂದವನ್ನು ಆಖೈರುಗೊಳಿಸುವ ಮುನ್ನ ತಮ್ಮೊಂದಿಗೆ ಚರ್ಚಿಸಿ ತಮ್ಮ ಅಹವಾಲು ಕೇಳಿಲ್ಲ ಎಂದು ಹೈಕೋರ್ಟ್ ಮೊರೆ ಹೋಗಿದ್ದರು. ಏಕ ಸದಸ್ಯ ಪೀಠ ಅವರ ಪರ ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಸಂಸ್ಥೆ ಮೇಲ್ಮನವಿ ಸಲ್ಲಿಸಿತ್ತು.
ಇದನ್ನೂ ಓದಿ: ಕೆಸರೆ ಗ್ರಾಮದ ಜಮೀನಿಗೆ ಮೈಸೂರು ನಗರದಲ್ಲಿ ಬದಲಿ ನಿವೇಶನ ನೀಡಿರುವ ಬಗ್ಗೆ ತನಿಖೆ ಅಗತ್ಯ: ಹೈಕೋರ್ಟ್ - MUDA Scam