ಬೆಂಗಳೂರು: ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಎಸ್ಐಟಿ ತನಿಖೆಗೆ ಹಾಜರಾಗುವಂತೆ ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಇದೀಗ ಪುತ್ರ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಪ್ರಜ್ವಲ್ ರೇವಣ್ಣ ಆಗಮನಕ್ಕೆ ಮನವಿ ಮಾಡಿದ್ದಾರೆ. ಆರೋಪಗಳು ಬಂದಾಗ ಅವುಗಳನ್ನು ಎದುರಿಸಿ ನಿಲ್ಲಬೇಕು. ಹೀಗಾಗಿ ಹಾಸನ ಸಂಸದರು ಎಲ್ಲಿಯೇ ಇದ್ದರೂ ಬಂದು ತನಿಖೆ ಎದುರಿಸಬೇಕು ಎಂದರು.
ಇದೇ ವೇಳೆ ಕಾಂಗ್ರೆಸ್ ನಾಯಕರು ದೇವೇಗೌಡರ ಕುಟುಂಬವನ್ನು ಟಾರ್ಗೆಟ್ ಮಾಡಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿ, ಇದನ್ನು ನಾವು ಹೇಳುತ್ತಿರುವುದಲ್ಲ, ರಾಜ್ಯದ ಎಲ್ಲಾ ಹಳ್ಳಿಗಳಲ್ಲಿ ಜನ ಮಾತನಾಡುತ್ತಿದ್ದಾರೆ. ದೇವೇಗೌಡರ ಕುಟುಂಬದ ಮೇಲೆ ಟಾರ್ಗೆಟ್ ರಾಜಕಾರಣ ನಡೆಯುತ್ತಿದೆ ಎಂಬ ಮಾತು ಜನರಿಂದ ಕೇಳಿ ಬರುತ್ತಿದೆ. ರೇವಣ್ಣರನ್ನು ಸಾಫ್ಟ್ ಟಾರ್ಗೆಟ್ ಮಾಡಿ ಜೈಲಿಗೆ ಕಳುಹಿಸಲೇಬೇಕು ಎಂದು ದುರುದ್ದೇಶದಿಂದ ಕಳುಹಿಸಿದ್ದಾರೆ. ಇದನ್ನು ಜನ ಕೂಡ ಗಮನಿಸುತ್ತಿದ್ದಾರೆ. ಹೆಚ್ಚು ದಿನ ಇದೆಲ್ಲಾ ನಡೆಯಲ್ಲ. ಸರ್ಕಾರದಲ್ಲಿರುವರು ನ್ಯಾಯಯುತ ಆಡಳಿತ ನಡೆಸುವುದನ್ನು ಕಲಿಯಬೇಕು ಎಂದು ಹೇಳಿದರು.
ಫೋನ್ ಟ್ಯಾಪಿಂಗ್ ಆರೋಪಕ್ಕೆ, ಕುಮಾರಸ್ವಾಮಿ ಅವರು ಯಾವುದೋ ಮೂಲದ ಮಾಹಿತಿಯಿಂದಲೇ ಈ ಹೇಳಿಕೆ ನೀಡಿದ್ದಾರೆ. ಎಸ್ಐಟಿ ರಚನೆಯಾದಾಗಿನಿಂದ ಪಾರದರ್ಶಕವಾಗಿ ತನಿಖೆ ನಡೆಯುತ್ತಿಲ್ಲ. ಹೀಗಾಗಿಯೇ ಈ ಕುರಿತು ಮಾತನಾಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಡಿಪ್ಲೊಮ್ಯಾಟಿಕ್ ಪಾಸ್ಪೋರ್ಟ್ ರದ್ದುಪಡಿಸಿ: ಮೋದಿಗೆ ಮತ್ತೆ ಪತ್ರ ಬರೆದ ಸಿಎಂ