ಶಿವಮೊಗ್ಗ: ನಾವು ವಿಕ್ರಮ್ ಸಾರಾಭಾಯಿ ಅವರ ಕನಸನ್ನು ಸಾಕಾರಗೊಳಿಸಿದಂತೆ ಇಂದಿನ ವಿದ್ಯಾರ್ಥಿಗಳು ಬಾಹ್ಯಾಕಾಶದಲ್ಲಿ ನಮ್ಮ ಆಸೆ ಈಡೇಸಿಕೊಳ್ಳಲಿ ಎಂದು ಯುಆರ್‌ಎಸ್‌ಸಿ ಜಿಸ್ಯಾಟ್-7 ಮಿಷನ್‌ನ ಮಾಜಿ ವಿಜ್ಞಾನಿ ಮತ್ತು ಯೋಜನಾ ನಿರ್ದೇಶಕ ಜಿ.ಶಿವಣ್ಣ ಆಶಿಸಿದರು.
ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು ಹಾಗೂ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ನಗರದ ಡಿವಿಎಸ್ ಪಿಯು ಸ್ವತಂತ್ರ ಕಾಲೇಜಿನಲ್ಲಿ ಇಂದು ನಡೆದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಂದ್ರಯಾನ-3ರ ಯಶಸ್ಸು ನಮ್ಮ ದೇಶದ ಹೆಮ್ಮೆಯಾಗಿದ್ದು, ಈ ಮೂಲಕ ನಮ್ಮ ಹಿರಿಯ ವಿಜ್ಞಾನಿಗಳ ಕನಸು ನನಸಾಗಿದೆ. ಬಾಹ್ಯಾಕಾಶ ವಿಜ್ಞಾನಿ ವಿಕ್ರಮ್ ಸಾರಾಭಾಯಿ ಸೇರಿದಂತೆ ಅನೇಕ ವಿಜ್ಞಾನಿಗಳು ಚಂದ್ರನ ಮೇಲೆ ಉಪಗ್ರಹ ಕಳುಹಿಸುವ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ಮಾಡುತ್ತಾ ಬಂದಿದ್ದು, ಚಂದ್ರಯಾನ-3ರ ಯಶಸ್ಸು ಅವರ ಕನಸಿನ ಫಲ ಎಂದರು.
ವಿಜ್ಞಾನಿಗಳಿಗೆ ನಿವೃತ್ತಿ ಎಂಬುದೇ ಇಲ್ಲ. ಇಂದು ಚಂದ್ರಯಾನ-3 ಯಶಸ್ವಿಯಾದ ದಿನ. ಇದರಿಂದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದು ಖುಷಿಯಾಗಿದೆ. ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಯೋಚನೆ ಮತ್ತು ಹೊಸ ಪ್ರಯೋಗ ಮಾಡಬೇಕು. ಬಾಹ್ಯಕಾಶ, ಅಣುಶಕ್ತಿ, ಕೃಷಿ ಸೇರಿದಂತೆ ರಾಕೆಟ್ ತಯಾರಿ ಬಗ್ಗೆ ಆಸಕ್ತಿ ಬೆಳೆಸಿಕೊಂಡು ವಿಜ್ಞಾನದಲ್ಲಿ ತೂಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಜ್ಞಾನಿ ಶಿವಣ್ಣನವರ ಜೊತೆ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಈ ವೇಳೆ ಅವರು, ಚಂದ್ರಯಾನ ಹೇಗೆ ನಡೆಯುತ್ತದೆ?. ನಮ್ಮ ದೇಶದ ರಾಕೆಟ್ಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಬಳಿಕ ಶಿವಣ್ಣರನ್ನು ಸನ್ಮಾನಿಸಲಾಯಿತು.
ಡಿವಿಎಸ್ ಕಾರ್ಯದರ್ಶಿ ರಾಜಶೇಖರ ಎಸ್., ಪಿಯು ಕಾಲೇಜಿನ ಪ್ರಾಂಶುಪಾಲರಾದ ಎ.ಈ.ರಾಜಶೇಖರ್, ಪಿಯು ಕಾಲೇಜಿನ ಶಿಕ್ಷಕ ಪ್ರತಿನಿಧಿ ಉಮೇಶ್ ಹೆಚ್.ಸಿ, ಜಿಲ್ಲಾ ಪಂಚಾಯಿತಿ ಜಿಲ್ಲಾ ಯೋಜನಾ ಸಂಯೋಜಕ ಶಂಕರ ಪಿ, ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಮಂಕಿಫಾಕ್ಸ್ ಬಗ್ಗೆ ಆತಂಕ ಬೇಡ, ವಿಮಾನ ನಿಲ್ದಾಣ, ಬಂದರು ಸೇರಿ ವಿವಿಧೆಡೆ ಬಿಗಿ ಕ್ರಮ: ಸಚಿವ ಪಾಟೀಲ್ - Monkeypox