ಬೆಂಗಳೂರು: "ನನ್ನ ಭವಿಷ್ಯಕ್ಕಿಂತ ನನ್ನ ಜಿಲ್ಲೆ, ರಾಜ್ಯ ಮುಖ್ಯ ಎಂದು ಅರಿತಿದ್ದೇನೆ. ಹೀಗಾಗಿ ಬಿಜೆಪಿ ಸೇರ್ಪಡೆಯಾಗಿದ್ದೇನೆ. ಮೋದಿ ಅವರ ಪರಿಕಲ್ಪನೆ, ಕನಸು ನನಗೆ ಬಿಜೆಪಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡಿದೆ" ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಇಂದು ಬಿಜೆಪಿ ಸೇರ್ಪಡೆಯಾದರು. ಅವರ ಜೊತೆಗೆ ಕೊಪ್ಪಳ ಮಾಜಿ ಸಂಸದ ಶಿವರಾಮೇಗೌಡ, ವಿಜಯಪುರದ ಹರ್ಷಗೌಡ ಶಿವಶರಣ ಪಾಟೀಲ್, ಮತ್ತು ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಸೇರಿದಂತೆ ಹಲವರು ಬಿಜೆಪಿ ಸೇರ್ಪಡೆಯಾದರು. ಪಕ್ಷದ ಧ್ವಜ ನೀಡಿ ಎಲ್ಲ ನಾಯಕರನ್ನು ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ವಾಗತಿಸಿದರು.
ಪಕ್ಷ ಸೇರ್ಪಡೆಯಾದ ನಂತರ ಮಾತನಾಡಿದ ಸುಮಲತಾ ಅಂಬರೀಶ್, "ನನ್ನ ರಾಜಕೀಯ ಜೀವನದಲ್ಲಿ ಮಹತ್ವದ ಸುದಿನ, ಐದು ವರ್ಷಗಳ ಹಿಂದೆ ಐತಿಹಾಸಿಕ ಗೆಲುವು ಸಿಕ್ಕಿತ್ತು. ಆ ಚುನಾವಣೆ ಎಂದಿಗೂ ಮರೆಯಲ್ಲ. ಅಂಬರೀಶ್ ಬಳಗ ಸಹಕಾರ ಕೊಟ್ಟರೆ, ಬಿಜೆಪಿ ಬಾಹ್ಯ ಬೆಂಬಲ ನೀಡಿ ಸಹಕಾರ ನೀಡಿತ್ತು. ಪ್ರಧಾನಿ ಮೋದಿ ಮೈಸೂರಿಗೆ ಬಂದು ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದ ನನ್ನ ಪರ ಪ್ರಚಾರ ಮಾಡಿದ್ದು ಮರೆಯಲು ಸಾಧ್ಯವಿಲ್ಲ" ಎಂದರು.
![MP Sumalata Ambarish has officially joined the BJP](https://etvbharatimages.akamaized.net/etvbharat/prod-images/05-04-2024/21152362_thumbnailmeg.jpg)
"ಐದು ವರ್ಷದ ಈ ಪ್ರಯಾಣದಲ್ಲಿ ಸಾಕಷ್ಟು ಕಲಿತಿದ್ದೇನೆ. 25 ವರ್ಷ ಅಂಬರೀಶ್ ಕಾಂಗ್ರೆಸ್ನಲ್ಲಿದ್ದರು. ಆದರೆ, ಬಿಜೆಪಿ ನಾಯಕರಿಂದ ನನಗೆ ಸಂಸತ್ನಲ್ಲಿ ಸಹಕಾರ ಸಿಕ್ಕಿದೆ. ಅದೇ ನನಗೆ ಮಾರ್ಗದರ್ಶನ ಸಿಕ್ಕಿದೆ. ಮೋದಿ ನನಗೆ ಸ್ಫೂರ್ತಿ. ಅವರ ಪರಿಕಲ್ಪನೆ, ಅವರ ಕನಸು ನೋಡಿ ಬಿಜೆಪಿ ಸೇರುವುದೇ ಉತ್ತಮ ಆಯ್ಕೆ ಎಂದು ನಿರ್ಧಾರ ಮಾಡಿದೆ. "ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಸಹಕಾರ ನೀಡಿದ್ದರು. ಮೈ ಶುಗರ್ ಕಾರ್ಖಾನೆ ಸಮಸ್ಯೆ ಹೇಳಿದಾಗ ದೃಢ ನಿರ್ಧಾರ ಕೈಗೊಂಡು ಪೂರಕ ಕ್ರಮ ವಹಿಸಿದರು. ಬೊಮ್ಮಾಯಿ ಬಂದು ಅನುದಾನ ನೀಡಿ ಕಾರ್ಖಾನೆ ತೆರೆಯುವ ಕೆಲಸ ಮಾಡಿದರು. ಇಂದು ಬೇರೆಯವರು ಕ್ರೆಡಿಟ್ ಪಡೆಯುತ್ತಿದ್ದಾರೆ. ಉದ್ಘಾಟನೆ ಆಗಿದ್ದ ಕಾರ್ಖಾನೆಯನ್ನು ಮತ್ತೆ ಉದ್ಘಾಟನೆ ಮಾಡುತ್ತಿದ್ದಾರೆ. ಇದಕ್ಕೆ ಜನ ಉತ್ತರ ಕೊಡಬೇಕು. ಮೈ ಶುಗರ್ ಸೇರಿ ಮಂಡ್ಯ ಅಭಿವೃದ್ಧಿ ಶ್ರೇಯ ಬಿಜೆಪಿಗೆ ಸಿಗಬೇಕು. ಬಿಜೆಪಿ ಸೇರುತ್ತಿರುವುದು ಅತ್ಯಂತ ಹೆಮ್ಮೆ ಹಾಗೂ ಸಂತೋಷದ ವಿಷಯ. ಇಷ್ಟು ದಿನ ಸಹಕಾರ ನೀಡಿದ ಎಲ್ಲರ ಸಹಕಾರ, ಆಶೀರ್ವಾದ ಇರಲಿ." ಎಂದು ರಾಜಕೀಯ ಹಾದಿಯಲ್ಲಿ ಸಹಕರಿಸಿದ್ದವರಿಗೆ ಧನ್ಯವಾದವನ್ನು ಸಲ್ಲಿಸಿ ಭವಿಷ್ಯದ ರಾಜಕೀಯಕ್ಕೆ ಆಶೀರ್ವಾದ ಕೋರಿದರು.
ಮೋದಿ ನಾಯಕತ್ವ ಮೆಚ್ಚಿ ಸುಮಲತಾ ಬಿಜೆಪಿಗೆ - ವಿಜಯೇಂದ್ರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, "ಮೋದಿ ನಾಯಕತ್ವ ಮೆಚ್ಚಿ ಇಡೀ ದೇಶದಲ್ಲಿ ಮೋದಿ ಪರ ವಾತಾವರಣ ನಿರ್ಮಾಣವಾಗಿದೆ. ಮೋದಿ ಈ ಬಾರಿ ಚುನಾವಣೆಯಲ್ಲಿ 400+ ಸ್ಥಾನದ ಗುರಿ ಹಾಕಿಕೊಂಡಿದ್ದಾರೆ. ರಾಜ್ಯದಲ್ಲಿ ಮೋದಿ ಮತ್ತೊಮ್ಮೆ ಎನ್ನುವ ವಾತಾವರಣ ಎಲ್ಲ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ. ದೇಶದ ಸುರಕ್ಷಿತ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರಿದ್ದಾರೆ. ಅಂಬರೀಶ್ ಜನಪ್ರಿಯತೆ, ಸುಮಲತಾ ಜನಪ್ರಿಯತೆ ಬಿಜೆಪಿಗೆ ಸಿಗಲಿದೆ. ಬಿಜೆಪಿಗೆ ಹೆಚ್ಚಿನ ಶಕ್ತಿ ಬರಲಿದೆ" ಎಂದರು.
![BJP state President B Y Vijayendra](https://etvbharatimages.akamaized.net/etvbharat/prod-images/05-04-2024/21152362_thumbnmeg.jpg)
"ಕೊಪ್ಪಳದ ಶಿವರಾಮೇಗೌಡರು ಬಿಜೆಪಿಯಿಂದಲೇ ಸಂಸದರಾಗಿದ್ದರು ಕಾರಣಾಂತರದಿಂದ ಕಾಂಗ್ರೆಸ್ ಸೇರಿದ್ದರು. ಆದರೆ ಈಗ ಮೋದಿ ಬೆಂಬಲಕ್ಕಾಗಿ ಬಿಜೆಪಿಗೆ ಬಂದಿದ್ದಾರೆ. ಇದರಿಂದ ಪಕ್ಷಕ್ಕೆ ಶಕ್ತಿ ಬಂದಿದೆ. ಸಚಿವ ಶಿವಾನಂದ ಪಾಟೀಲ್ ಸಹೋದರನ ಪುತ್ರ ಹರ್ಷಗೌಡ ಶಿವಶರಣ ಪಾಟೀಲ್ ಸೇರ್ಪಡೆ ವಿಜಯಪುರದಲ್ಲಿ ಬಿಜೆಪಿ ಶಕ್ತಿ ತಂದಿದೆ. ದೊಡ್ಡ ಗಣೇಶ್ ಸೇರ್ಪಡೆಯೂ ಯುವಕರಲ್ಲಿ ಹೆಚ್ಚಿನ ಉತ್ಸಾಹ ತಂದಿದೆ. ಕನಕಗಿರಿ ಕ್ಷೇತ್ರದ ಗಾಯತ್ರಿ ತಿಮ್ಮಾರೆಡ್ಡಿಗೌಡ, ಹಳಿಯಾಳದ ಶ್ರೀನಿವಾಸ ಘೋಟ್ನೇಕರ್, ತುಕಾರಾಂಗೌಡ ಪಾಟೀಲ್ ಸೇರಿ ಹಲವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಎಲ್ಲ 28 ಕ್ಷೇತ್ರಗಳನ್ನು ಗೆಲ್ಲುವ ಸಂಕಲ್ಪ ಇರುವ ಸಂದರ್ಭದಲ್ಲಿ ಪಕ್ಷ ಸೇರ್ಪಡೆ ಸ್ವಾಗತಾರ್ಹ. ಅವರ ಸಾಮರ್ಥ್ಯ ಬಳಸಿಕೊಳ್ಳಲಿದ್ದೇವೆ. ಜವಾಬ್ದಾರಿಯುತವಾಗಿ ನಡೆಸಿಕೊಂಡು ಅವರ ಸೇವೆ ಬಳಸಿಕೊಳ್ಳಲಾಗುತ್ತದೆ" ಎಂದರು.
ಇನ್ನು ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸಿ ಬಿಜೆಪಿ ವೇದಿಕೆಯಲ್ಲಿ ನಟ ನಿರ್ಮಾಕ ರಾಕ್ಲೈನ್ ವೆಂಕಟೇಶ್ ಕಾಣಿಸಿಕೊಂಡರು. ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗದೇ ಇದ್ದರೂ ಪಕ್ಷದ ಶಾಲು ಧರಿಸಿ ಬೆಂಬಲ ನೀಡಿದರು.
![MP Sumalata Ambarish has officially joined the BJP](https://etvbharatimages.akamaized.net/etvbharat/prod-images/05-04-2024/21152362_thumbnameg.jpg)
ವಿದ್ಯುತ್ ಕಟ್: ಇನ್ನು ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯುವ ವೇಳೆ ಎರಡು ಬಾರಿ ವಿದ್ಯುತ್ ಕೈಕೊಟ್ಟಿತು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡುವಾಗ ಮೊದಲ ಬಾರಿ ವಿದ್ಯುತ್ ಕೈಕೊಟ್ಟಿತು. ಕತ್ತಲಲ್ಲೇ ಕೆಲಕ್ಷಣ ಭಾಷಣ ಮಾಡಿದರು. ನಂತರ ಸುಮಲತಾ ಬಿಜೆಪಿ ಸೇರ್ಪಡೆ ಆಗುವ ವೇಳೆ ಎರಡನೇ ಬಾರಿ ವಿದ್ಯುತ್ ಕೈಕೊಟ್ಟಿತು. ಕೆಲಕ್ಷಣ ಕತ್ತಲಲ್ಲೇ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ ವಾಲ್, ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಮಾಜಿ ಸಿಎಂ ಡಿವಿ ಸದಾನಂದಗೌಡ, ಮಾಜಿ ಸಚಿವ ಜನಾರ್ದನ ರೆಡ್ಡಿ, ಮಾಜಿ ಸಚಿವ ನಾರಾಯಣಗೌಡ ಉಪಸ್ಥಿತರಿದ್ದರು.
ಇದನ್ನೂ ಓದಿ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಇಂದು ಬಿಜೆಪಿ ಸೇರ್ಪಡೆ - Sumalatha Ambareesh