ಮಂಗಳೂರು: ಸಮಾಜದಲ್ಲಿ ಸಾಮರಸ್ಯ, ಸಮಾನತೆಯನ್ನು ಇರಬೇಕೆಂದುಕೊಳ್ಳುವವರೇ ಮೆಜಾರಿಟಿ. ಅದನ್ನು ನಂಬದವರು ಮೈನಾರಿಟಿ. ಯಾವುದೇ ಧರ್ಮದವರಾಗಿರಿ, ಸಮಾಜದ ಸಮಾನತೆ, ಸಂವಿಧಾನವನ್ನು ನಂಬಿದರೆ ನೀವು ನಮ್ಮ ಕಡೆಯವರು. ಹಾಗಾಗಿ ಮೆಜಾರಿಟಿ ಇರುವವರಿಂದ ಮಂಗಳೂರಿನಲ್ಲಿ ಬಹುತ್ವ ಸಂಸ್ಕೃತಿಯನ್ನು ಕಟ್ಟುವ ಕಾರ್ಯ ಆಗಬೇಕು ಎಂದು ದ.ಕ.ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ, ತಮಿಳುನಾಡಿನ ತಿರುವಳ್ಳುವರ್ ಕ್ಷೇತ್ರದ ಸಂಸದ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಮದರ್ ತೆರೇಸಾ 27ನೇ ಸಂಸ್ಮರಣೆಯ ನಿಮಿತ್ತ ಮಂಗಳೂರಿನ ಪುರಭವನದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸದ್ಯ ದೇಶದಲ್ಲಿ ಎರಡು ಮನಸ್ಥಿತಿಯ ನಡುವೆ ಯುದ್ಧಗಳು ನಡೆಯುತ್ತಿದೆ. ಒಂದು ಎಲ್ಲರನ್ನೂ ಸಮಾನತೆಯಿಂದ ನೋಡುವುದಾಗಿದೆ. ಮತ್ತೊಂದೆಡೆ ತಾವೇ ಮೇಲು ಭಾವನೆಯನ್ನು ಹೊಂದಿರುವ ಮನಸ್ಥಿತಿಯಿದೆ. ಮೇಲು - ಕೀಳು ಯುದ್ಧಗಳು ಬಹಳ ವರ್ಷಗಳಿಂದ ಆಗುತ್ತಲೇ ಇದೆ. ಈಗಲೂ ಅದು ಮುಂದುವರಿದಿದೆ. ನಮ್ಮ ಸ್ವಾತಂತ್ರ್ಯ ಹೋರಾಟ ಬ್ರಿಟಿಷರ ವಿರುದ್ಧ ಆಗಿದ್ದಲ್ಲ. 70 ಪರ್ಸೆಂಟ್ ಹೋರಾಟ ಸಮಾನತೆಗಾಗಿ ಆಗಿದೆ ಎಂದು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಇರುವಷ್ಟು ವೈವಿಧ್ಯತೆ ದೇಶದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇದೊಂದು ಮಿನಿ ಭಾರತ. ನಾವು ವಿಭಿನ್ನ ಸಂಸ್ಕೃತಿ ಆಚರಿಸಬೇಕು. ನನ್ನನ್ನು ಕಂಡರೆ ಎಷ್ಟು ಜನರಿಗೆ ಇಷ್ಟವಿದೆಯೋ ಗೊತ್ತಿಲ್ಲ. ಮಕ್ಕಳು ಮಾತ್ರ ನನ್ನನ್ನು ಪ್ರೀತಿಸುತ್ತಾರೆ. ನಮಗೆ ಬೇಕಿರುವುದು ಸಮಾಧಾನ, ನೆಮ್ಮದಿ ಅಷ್ಟೇ. ಎಲ್ಲಿ ಶಾಂತಿ, ನೆಮ್ಮದಿ ಇದೆಯೋ ಅದನ್ನು ನೋಡಿಕೊಂಡು ರಾಜಕೀಯ ಮಾಡಬೇಕು. ಮಕ್ಕಳ ಭವಿಷ್ಯಕ್ಕಾಗಿ ರಾಜಕೀಯದಲ್ಲಿ ಸಕ್ರಿಯವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಅವರು ಹೇಳಿದರು.
ಮಳೆ ಬಂದರೆ ಈಗಲೂ ನನ್ನ ಮೀಮ್ಸ್ ಬರುತ್ತಿರುತ್ತೆ: ನೆನಪು ಬಿಚ್ಚಿಟ್ಟ ಸಸಿಕಾಂಥ್ ಸೆಂಥಿಲ್
ಮಳೆ ಬಂದರೆ ಈಗಲೂ ನನ್ನ ಮೀಮ್ಸ್ ಬರುತ್ತಿರುತ್ತೆ ಎಂದು ಹೇಳುತ್ತಾ ಮಾಜಿ ಜಿಲ್ಲಾಧಿಕಾರಿ, ಮಂಗಳೂರಿನಿಂದಲೇ ಐಎಎಸ್ ಗೆ ರಾಜೀನಾಮೆ ನೀಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನೆನಪು ಬಿಚ್ಚಿಟ್ಟರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಂದರ್ಭದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತದೆ. ರಜೆ ಘೋಷಿಸುವ ಜಿಲ್ಲಾಧಿಕಾರಿ ಮಕ್ಕಳ ಫೇವರಿಟ್ ಆಗುತ್ತಾರೆ. ಸಸಿಕಾಂತ್ ಸೆಂಥಿಲ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದಾಗ ಭಾರೀ ಮಳೆಗೆ ಹಲವು ರಜೆಗಳನ್ನು ನೀಡಿದ್ದರು. ಈ ರಜೆ ನೀಡಿದ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಇಂದು ಮಂಗಳೂರಿಗೆ ಬಂದ ಸಂದರ್ಭದಲ್ಲಿ ಮಳೆಗಾಲದಲ್ಲಿ ತನ್ನ ಮೀಮ್ಸ್ ಬರುವ ಬಗ್ಗೆ ಖುಷಿಪಟ್ಟರು.
ಈಗ ತಮಿಳುನಾಡಿನ ತಿರುವಳ್ಳುವರ್ ಕ್ಷೇತ್ರದ ಸಂಸದ ಸಸಿಕಾಂತ್ ಸೆಂಥಿಲ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಆಗಿದ್ದ ಸಂದರ್ಭ ಅವರು ಮಳೆಗಾಲದಲ್ಲಿ ಶಾಲೆಗೆ ರಜೆ ಕೊಡುವ ಡಿಸಿ ಎಂದೇ ಫೇಮಸ್ಸ್ ಆಗಿದ್ರು. ಆದ್ದರಿಂದ ಸಸಿಕಾಂತ್ ಸೆಂಥಿಲ್ ಅವರನ್ನು ಕಂಡರೆ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಸೆಂಥಿಲ್ ಅವರಿಗೂ ಮಕ್ಕಳ ಬಗ್ಗೆ ಅಕ್ಕರೆ. ಮಂಗಳೂರಿಗೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಸೆಂಥಿಲ್ ಅವರು, ಮಕ್ಕಳ ರಜೆಯ ವಿಚಾರವನ್ನು ನೆನಪಿಸಿದ್ದು ಹೀಗೆ.
ಮಂಗಳೂರಿನಲ್ಲಿ ನನ್ನ ಬಗ್ಗೆ ಯಾರಿಗೆ ಇಷ್ಟ ಇದೆಯೋ ಇಲ್ವೋ ಗೊತ್ತಿಲ್ಲ. ಮಕ್ಕಳಿಗೆ ಬಹಳ ಇಷ್ಟ. ಮಳೆ ಬಂದರೆ ಈಗಲೂ ನನ್ನ ಮೀಮ್ಸ್ ಬರ್ತಾ ಇರುತ್ತೆ. ಈಗಿನ ಡಿಸಿ ಅಂಕಲ್ ಇದ್ದಾರಲ್ಲಾ, ಒಳ್ಳೆಯ ಡಿಸಿ ಅಂಕಲ್. ನಾನು ಹೇಳಿದ್ದೇನೆ ಅವರಿಗೆ 'ಮಕ್ಕಳಿಗೆ ರಜೆ ಕೊಡುವುದರಲ್ಲಿ ನೀವು ನನ್ನನ್ನು ಬೀಟ್ ಮಾಡಬೇಕು' ಅಂಥ ಹೇಳಿದ್ದೇನೆ. ಅವರು ಬೀಟ್ ಮಾಡಿದ್ದಾರೆ ಅಂಥ ಅಂದುಕೊಳ್ಳುವೆ. ಹೀಗೆ ಹೇಳಿ ಸಭಿಕರನ್ನು ವಿದ್ಯಾರ್ಥಿಗಳನ್ನು ನಗೆ ನಗೆಗಡಲಲ್ಲಿ ತೇಲಿಸಿದ್ರು.