ಬೆಂಗಳೂರು: "ನನ್ನ ಹನಿಟ್ರ್ಯಾಪ್ ನಡೆದಿಲ್ಲ. ಗೌರವಯುತವಾಗಿ ಬದುಕುತ್ತಿರುವ ನನ್ನ ಪರಿಚಿತರನ್ನು ಹನಿಟ್ರ್ಯಾಪ್ ಮಾಡಿ, ಬ್ಲಾಕ್‌ಮೇಲ್ ಮಾಡಲಾಗುತ್ತಿತ್ತು. ನನ್ನ ಕ್ಷೇತ್ರದಲ್ಲಿ ಇಂತಹ ಚಟುವಟಿಕೆಗಳು ನಡೆಯುವುದನ್ನು ತಡೆಯುವ ಸಲುವಾಗಿ ಪೊಲೀಸರಿಗೆ ದೂರು ಕೊಡಿಸಿದ್ದೇನೆ" ಎಂದು ಮೈಸೂರಿನ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರೀಶ್ಗೌಡ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನ್ನ ವಿರುದ್ದ ಯಾವುದೇ ರಾಜಕೀಯ ಷಡ್ಯಂತ್ರ ನಡೆದಿಲ್ಲ. ಹನಿಟ್ರ್ಯಾಪ್ ಆಗಿಲ್ಲ. ಆದರೆ, ನನ್ನ ಕ್ಷೇತ್ರದಲ್ಲಿ 8ರಿಂದ 10 ಜನರಿಗೆ ಹನಿಟ್ರ್ಯಾಪ್ ಮಾಡಿದ್ದಾರೆ. ಅವರೆಲ್ಲಾ ನನಗೆ ಪರಿಚಯಸ್ಥರೇ. ಅವರಲ್ಲಿ ಒಬ್ಬರು ಈ ಮಾಹಿತಿಯನ್ನು ನನಗೆ ನೀಡಿದರು. ಅವರೆಲ್ಲರೂ ಗೌರವಯುತವಾಗಿ ಬದುಕುತ್ತಿರುವವರು. ಮೊದಲು ಅವರು ಹೇಳಿದ್ದನ್ನು ನಿರ್ಲಕ್ಷಿಸಿದ್ದೆ. ನಂತರ ಐದು ಜನ ಒಟ್ಟಿಗೆ ಬಂದು ಹನಿಟ್ರ್ಯಾಪ್ ಬ್ಲಾಕ್‌ಮೇಲ್ ಮಾಡುತ್ತಿರುವ ಮಾಹಿತಿ ನೀಡಿದರು" ಎಂದು ತಿಳಿಸಿದರು.
"ಬೆಂಗಳೂರು ಮತ್ತು ಮೈಸೂರು ಎರಡು ಕಡೆಯೂ ತೊಂದರೆ ಕೊಡುವ ಕೆಲಸವಾಗುತ್ತಿತ್ತು. ಹಾಗಾಗಿ ಬೆಂಗಳೂರು ಪೊಲೀಸ್ ಕಮಿಷನರ್ಗೆ ದೂರು ಕೊಡಿಸಿದ್ದೇನೆ. ಈ ರೀತಿ ಬ್ಲಾಕ್‌ಮೇಲ್ ಮಾಡುತ್ತಿರುವವರು ಯಾರು? ಎನ್ನುವ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಇದೀಗ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ" ಎಂದರು.
"ಬ್ಲಾಕ್‌ಮೇಲ್ ಮಾಡುತ್ತಿರುವವರು ಮೈಸೂರಿನವರಾದರೂ ಅವರನ್ನು ಇದುವರೆಗೂ ನಾನು ನೋಡಿಲ್ಲ. ಅವರು ನನಗೆ ಗೊತ್ತೂ ಇಲ್ಲ. ದೂರವಾಣಿ ಸಂಖ್ಯೆಯ ಮೂಲಕ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
"ನಿಮ್ಮ ಫೋಟೋ ಇದೆ. ಅದನ್ನು ನಿಮ್ಮ ಕುಟುಂಬಕ್ಕೆ ತೋರಿಸಿ, ಬಹಿರಂಗಪಡಿಸುತ್ತೇವೆ. ಹೀಗಾಗಿ, ಹಣ ಕೊಡಿ ಎಂದು ಹೆದರಿಸುತ್ತಿದ್ದರು. ಉದ್ಯಮಿಗಳು, ಡಾಕ್ಟರ್, ಇಂಜಿನಿಯರ್, ಪ್ರೊಫೆಸರ್ಗಳಿಗೂ ಬ್ಲಾಕ್‌ಮೇಲ್ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಇದೆಲ್ಲಾ ನಡೆಯಬಾರದು ಎನ್ನುವ ಕಾರಣಕ್ಕಾಗಿ ಪೊಲೀಸರಿಗೆ ದೂರು ಕೊಡಿಸಿದ್ದೇನೆ. ಬೆಂಗಳೂರಿನಲ್ಲೂ ಈ ಜಾಲ ಇರುವ ಕಾರಣ ಇಲ್ಲಿ ದೂರು ಕೊಡಲಾಗಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹನಿಟ್ರ್ಯಾಪ್ನಲ್ಲಿ ಶಾಸಕ ಹರೀಶ್ ಗೌಡರನ್ನು ಸಿಲುಕಿಸಲು ಯತ್ನ: ಇಬ್ಬರು ಅರೆಸ್ಟ್ - Bengaluru Honeytrap Case