ಸಕ್ಕರೆ ಕಾರ್ಖಾನೆಗೆ ಸಿಗದ ಅನುಮತಿ: ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಯತ್ನಾಳ್ ಧರಣಿ: ಆರ್.ಅಶೋಕ್ ಹೋರಾಟ ಎಚ್ಚರಿಕೆ - MLA Yatnal Protest - MLA YATNAL PROTEST
ಸಕ್ಕರೆ ಕಾರ್ಖಾನೆ ಆರಂಭಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡದ ಹಿನ್ನೆಲೆಯಲ್ಲಿ ಕಾರ್ಖಾನೆ ಮಾಲೀಕರೂ ಆದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕುಳಿತು ಧರಣಿ ನಡೆಸಿದರು. ವಿಪಕ್ಷ ನಾಯಕ ಅಶೋಕ್ ಕೂಡ ಸಾಥ್ ನೀಡಿದರು.
Published : Aug 28, 2024, 6:57 AM IST
ಬೆಂಗಳೂರು: ಸಕ್ಕರೆ ಕಾರ್ಖಾನೆ ಆರಂಭಕ್ಕೆ ಕೋರ್ಟ್ ಆದೇಶ ನೀಡಿದರೂ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಗೆ ಕ್ರಮ ವಹಿಸದ ನಿರ್ಧಾರ ಖಂಡಿಸಿ ಸಕ್ಕರೆ ಕಾರ್ಖಾನೆ ಮಾಲೀಕರೂ ಆಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಧರಣಿ ನಡೆಸಿದ್ದಾರೆ. ಮಂಗಳವಾರ ರಾತ್ರಿಯಾದರೂ ಯತ್ನಾಳ್ ಕಚೇರಿ ಬಿಟ್ಟು ತೆರಳದ್ದರಿಂದ ಪಿಸಿಬಿಯಲ್ಲಿ ಹೈಡ್ರಾಮಾ ನಡೆಯಿತು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಸಕ್ಕರೆ ಕಾರ್ಖಾನೆ ತೆರೆಯಲು ಅವಕಾಶ ನೀಡಿ ಕೋರ್ಟ್ ಆದೇಶವಿರುವ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿದರು. ಮಂಡಳಿ ಧೋರಣೆಗೆ ಅಸಮಾಧಾನಗೊಂಡು ರಾತ್ರಿಯಾದರೂ ನಿರ್ಗಮಿಸದೇ ಪ್ರತಿಭಟನೆ ರೂಪದಲ್ಲಿ ಪಿಸಿಬಿ ಕಚೇರಿಯಲ್ಲೇ ಬೀಡುಬಿಟ್ಟರು.
ಕಾರ್ಖಾನೆ ತೆರೆಯಲು ಕೋರ್ಟ್ ಆದೇಶ ನೀಡಿದ್ದರೂ ಇನ್ನೂ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ವಹಿಸದ ಹಿನ್ನೆಲೆಯಲ್ಲಿ ಪಿಸಿಬಿ ಕಚೇರಿಯಲ್ಲೇ ಇರುವ ಯತ್ನಾಳ್ ಧರಣಿ ರೂಪದ ವರ್ತನೆ ತೋರಿದರು.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆ ಲೈಸನ್ಸ್ ನವೀಕರಣ ಆಗಿಲ್ಲ ಮತ್ತು ಎಥೆನಾಲ್ ಉತ್ಪಾದನೆ ವಿಚಾರದಲ್ಲಿ ನಿಯಮ ಉಲ್ಲಂಘನೆ ಎಂದು ಕಾರ್ಖಾನೆ ಮುಚ್ಚಿಸಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆ ಮುಚ್ಚುವಂತೆ ನೋಟಿಸ್ ನೀಡಿತ್ತು. ಮಂಡಳಿಯ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದ ಯತ್ನಾಳ್, ಕಾನೂನು ಸಮರ ನಡೆಸಿದ್ದರು.
ಕೆಲವು ದಿನಗಳ ಹಿಂದೆ ಕಾರ್ಖಾನೆ ತೆರೆಯಲು ಆದೇಶ ನೀಡಿದ್ದ ಹೈಕೋರ್ಟ್, ಯತ್ನಾಳ್ ಪರ ತೀರ್ಪು ನೀಡಿತ್ತು. ಆದರೆ ಕೋರ್ಟ್ ಆದೇಶ ಪಾಲಿಸದೇ ಮೇಲ್ಮನವಿ ಹೋಗಲು ಪಿಸಿಬಿ ಸಿದ್ಧತೆ ಹಿನ್ನೆಲೆಯಲ್ಲಿ ಪಿಸಿಬಿ ಕಚೇರಿಯಲ್ಲಿ ಕುಳಿತ ಶಾಸಕ ಯತ್ನಾಳ್ ಅನುಮತಿಗಾಗಿ ಪಟ್ಟುಹಿಡಿದರು.
ಸ್ಥಳಕ್ಕೆ ವಿಪಕ್ಷ ನಾಯಕ ಅಶೋಕ್ ಕರೆಸಿಕೊಂಡ ಯತ್ನಾಳ್ ಪಿಸಿಬಿ ವರ್ತನೆ ಬಗ್ಗೆ ವಿವರ ನೀಡಿದರು. ಯತ್ನಾಳ್ ಕರೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಶೋಕ್ ತೆರಳಿ ಯತ್ನಾಳ್ಗೆ ಬೆಂಬಲ ವ್ಯಕ್ತಪಡಿಸಿದರು. ಜೊತೆಗೆ ಮಂಡಳಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಹೋರಾಟದ ಎಚ್ಚರಿಕೆ: ಶಾಸಕ ಯತ್ನಾಳ್ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಎನ್ಒಸಿ ನೀಡದಿದ್ದರೆ, ಬಿಜೆಪಿ ಶಾಸಕರೆಲ್ಲ ಸೇರಿ ಹೋರಾಟ ಮಾಡಲಿದ್ದೇವೆ. ಅದಕ್ಕೂ ಬಗ್ಗದಿದ್ದರೆ ಕಬ್ಬು ಬೆಳೆದ ರೈತರೊಂದೊಗೆ ದೊಡ್ಡಮಟ್ಟದ ಹೋರಾಟ ಮಾಡಬೇಕಾಗಲಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಮಾಲಿನ್ಯ ನಿಯಂತ್ರಸ ಮಂಡಳಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆ ಕಾರ್ಯಾಚರಣೆಗೆ ಸಮ್ಮತಿಸಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ ಆ.21ರಂದು ಆದೇಶಿಸಿದೆ. ಆದರೂ ಮಾಲಿನ್ಯ ನಿಯಂತ್ರಣ ಮಂಡಳಿ ಎನ್ಒಸಿ ನೀಡದೆ ದ್ವೇಷ ಸಾಧಿಸುತ್ತಿದೆ. ಇದರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಂಗಳವಾರ ಬೆಳಗ್ಗೆಯಿಂದಲೇ ಮಂಡಳಿ ಕಚೇರಿಯಲ್ಲಿ ಕುಳಿತಿದ್ದಾರೆ. ರಾತ್ರಿಯಾದರೂ ಕಚೇರಿಯಲ್ಲೇ ಧರಣಿ ರೂಪದಲ್ಲಿ ಕುಳಿತಿದ್ದಾರೆ. ಅವರ ಹೋರಾಟಕ್ಕೆ ನಾನು ಮತ್ತು ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಜೊತೆಯಾಗಿದ್ದೇವೆ ಎಂದರು.
ಮಂಡಳಿ ಅಧಿಕಾರಿಗಳು ಕುಂಟು ನೆಪವೊಡ್ಡಿ ಕಾಲಹರಣ ಮಾಡುತ್ತಿದ್ದಾರೆ. ಮಂಡಳಿ ಅಧಿಕಾರಿಗಳು ಅನುಮತಿ ಪತ್ರ ನೀಡದಿದ್ದರೆ ಪಕ್ಷದ ಶಾಸಕರೆಲ್ಲ ಸೇರಿ ಹೋರಾಟ ಮಾಡಲಿದ್ದೇವೆ. ಮಣಿಯದಿದ್ದರೆ ಕಬ್ಬು ಬೆಳೆದ ರೈತರ ನೇತೃತ್ವದಲ್ಲಿ ದೊಡ್ಡ ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಗೆ ಎಚ್ಚರಿಕೆ ನೀಡಿದರು.
ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿ ನಾಲ್ಕು ತಿಂಗಳ ಹಿಂದೆಯೇ ಸಕ್ಕರೆ ಕಾರ್ಖಾನೆ ಮುಚ್ಚಿಸಿದ್ದಾರೆ. ಇದರ ವಿರುದ್ಧ ಯತ್ನಾಳ್ ಹೈಕೋರ್ಟ್ ಮೊರೆ ಹೋಗಿ ಕಾನೂನು ಹೋರಾಟ ನಡೆಸಿ, ಮತ್ತೆ ಕಾರ್ಖಾನೆ ಕಾರ್ಯಾಚರಣೆಗೆ ಅನುಮತಿ ಪಡೆದಿದ್ದಾರೆ. ಈ ಪ್ರಕರಣದ ವಾದ, ಪ್ರತಿವಾದದ ವೇಳೆ ಅಡ್ವೋಕೇಟ್ ಜನರಲ್, ಮಂಡಳಿ ಪರ ವಕೀಲರು ಇದ್ದರು. ಮುಖ್ಯ ನ್ಯಾಯಮೂರ್ತಿ ನೀಡಿದ ಆದೇಶ ಅವರಿಗೂ ಗೊತ್ತಿದೆ. ಆದರೂ ಆದೇಶದ ಪ್ರತಿ ಕೇಳಿದ್ದರು. ಅದನ್ನೂ ಯತ್ನಾಳ್ ಒದಗಿಸಿದ್ದಾರೆ. ಆದರೂ ಎನ್ಒಸಿ ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ದೂರಿದರು.
ಇದು ಕಬ್ಬು ಅರೆಯುವ ಸಮಯ. ಕಬ್ಬು ಬೆಳೆದ ರೈತರಿಗೆ ಪರ್ಯಾಯ ಸಕ್ಕರೆ ಕಾರ್ಖಾನೆಯನ್ನೂ ತೋರಿಸಿಲ್ಲ. ಇದರಿಂದಾಗಿ ಕಬ್ಬು ಬೆಳೆದ ರೈತರು ಕಷ್ಟಕ್ಕೆ ಸಿಲುಕಿದ್ದಾರೆ. ಮಂಡಳಿಯ ಈ ದ್ವೇಷದ ನಡೆಯನ್ನು ಖಂಡಿಸುತ್ತೇನೆ. ಕೂಡಲೇ ಕಾರ್ಖಾನೆ ಆರಂಭಕ್ಕೆ ಎನ್ಒಸಿ ಕೊಡಬೇಕು ಇಲ್ಲದಿದ್ದರೆ, ಹೋರಾಟ ಎದುರಿಸಬೇಕಾಗಲಿದೆ ಎಂದು ಅಶೋಕ್ ಎಚ್ಚರಿಸಿದರು.
ಇದನ್ನೂ ಓದಿ: ಖರ್ಗೆ ಕುಟುಂಬದ ಟ್ರಸ್ಟ್ಗೆ ಕೆಐಎಡಿಬಿ ಜಮೀನು: ರಾಜ್ಯಪಾಲರಿಗೆ ದೂರು ನೀಡಿದ ಛಲವಾದಿ ನಾರಾಯಣಸ್ವಾಮಿ - Kharge Family Trust