ಬೆಳಗಾವಿ: ಕಿತ್ತೂರು ತಾಲೂಕಿನ ನಿಂಗಾಪುರ ಗ್ರಾಮದ ಜನರ ಸಂಕಷ್ಟಕ್ಕೆ ಕೊನೆಗೂ ಶಾಸಕ ಬಾಬಾಸಾಹೇಬ ಪಾಟೀಲ ಮುಕ್ತಿ ಹಾಡಿದ್ದಾರೆ. ಜಿಲ್ಲಾಡಳಿತದ ನೆರವಿನೊಂದಿಗೆ ಗ್ರಾಮಕ್ಕೆ ಬೋಟ್ ಕೊಡಿಸುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.
ಭಾರೀ ಮಳೆಯಿಂದ ಧಾರವಾಡ ಜಿಲ್ಲೆಯ ಅಳ್ನಾವರದ ಇಂದ್ರಮ್ಮನ ಕೆರೆ ತುಂಬಿದೆ. ಕಿತ್ತೂರು ತಾಲೂಕಿನ ನಿಂಗಾಪುರ ಗ್ರಾಮಕ್ಕೂ ಈ ಇಂದ್ರಮ್ಮನ ಕೆರೆ ವ್ಯಾಪಿಸಿದೆ. ಕೆರೆಯ ಒಂದು ಕಡೆ ಜನವಸತಿ ಪ್ರದೇಶವಿದ್ದರೆ, ಮತ್ತೊಂದೆಡೆ ಕೃಷಿ ಭೂಮಿ ಇದೆ. ಈ ಅಪಾಯಕಾರಿ ಕೆರೆಯಲ್ಲಿ ನಿತ್ಯ ಟಯರ್ ಟ್ಯೂಬ್‌ನಿಂದ ನಿರ್ಮಿಸಿದ ಸಣ್ಣ ಬೋಟ್‌ನಲ್ಲೇ ಜನರು ಕೆರೆ ದಾಟುತ್ತಿದ್ದರು.
ಭರವಸೆ ಈಡೇರಿಸಿದ ಶಾಸಕ: ಎರಡೂ ಕಡೆ ಹಗ್ಗದ ಸಹಾಯದಿಂದ ಟ್ಯೂಬ್ ಎಳೆದು ಮಕ್ಕಳನ್ನು ಕರೆದುಕೊಳ್ಳುತ್ತಾರೆ. ಕಳೆದ 25 ವರ್ಷಗಳಿಂದ ತುಂಬಿದ ಕೆರೆಯಲ್ಲಿ ಮಕ್ಕಳು, ಮಹಿಳೆಯರ ಸಾವಿನ ಸಂಚಾರ ಮಾಡುತ್ತಿದ್ದರು. ಈ ಬಗ್ಗೆ 'ಈಟಿವಿ ಭಾರತ'ವೂ ಕೂಡ ಭಾರತ ವರದಿ ಪ್ರಕಟಿಸಿತ್ತು. ಬಳಿಕ ಸ್ಥಳಕ್ಕೆ ಸ್ಥಳೀಯ ಶಾಸಕ ಬಾಬಾಸಾಹೇಬ ಪಾಟೀಲ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದ್ದರು. ಅಲ್ಲದೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಕೊಟ್ಟ ಮಾತಿನಂತೆ ಗ್ರಾಮಕ್ಕೆ ಬೋಟ್ ವ್ಯವಸ್ಥೆ ಕಲ್ಪಿಸಿದ್ದಾರೆ.
ಮಂಗಳವಾರ ಸಂಜೆ ಕಿತ್ತೂರಿನ ಮಿನಿ ವಿಧಾನಸೌಧದಿಂದ ಎಸ್ಡಿಆರ್ಎಫ್ ಬೋಟ್ ಅನ್ನು ಶಾಸಕ ಬಾಬಾಸಾಹೇಬ ಪಾಟೀಲ ಬೀಳ್ಕೊಟ್ಟರು. ನಿಂಗಾಪುರಕ್ಕೆ ಬೋಟ್ ಬರುತ್ತಿದ್ದಂತೆ ಗ್ರಾಮದ ಮಹಿಳೆಯರು ಪೂಜೆ, ಸಲ್ಲಿಸಿ ಆರತಿ ಬೆಳಗಿ ಸ್ವಾಗತಿಸಿದರು. ಗ್ರಾಮಸ್ಥರು ಬೋಟ್ ಬಂದ ಖುಷಿಯಲ್ಲಿ ಸಂಭ್ರಮಿಸಿದರು. ಮಕ್ಕಳ ಸಂತಸಕ್ಕೆ ಪಾರವೇ ಇರಲಿಲ್ಲ.
ಗ್ರಾಮದ ಹಿರಿಯ ಮಹಿಳೆ ಶಾರವ್ವ ಈಟಿವಿ ಭಾರತ ಜೊತೆಗೆ ಮಾತನಾಡಿ, "ಶಾಸಕರಾದ ಬಾಬಾಸಾಹೇಬ ಪಾಟೀಲರು ನಮ್ಮ ಕಷ್ಟ ಅರಿತು ನಮ್ಮೂರಿಗೆ ಬೋಟ್ ಕೊಡಿಸಿದ್ದಾರೆ. ನಮಗೆ ಬಹಳ ಖುಷಿಯಾಗಿದೆ. ಸೇತುವೆ ಒಂದು ಆದರೆ, ನಮಗೆ ತುಂಬಾ ಅನುಕೂಲ ಆಗಲಿದೆ' ಎಂದು ಕೇಳಿಕೊಂಡರು.
ಗ್ರಾಮದ ಯುವಕ ಸಂತೋಷ ಮಡಿವಾಳರ ಮಾತನಾಡಿ, "ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಟಯರ್ ಟ್ಯೂಬ್ ಮೇಲೆ ಕೆರೆ ದಾಟುವ ಪರಿಸ್ಥಿತಿ ಇತ್ತು. ಸದ್ಯಕ್ಕೆ ಬೋಟ್ ಬಂದಿದೆ. ಆದಷ್ಟು ಬೇಗನೆ ಸೇತುವೆ ನಿರ್ಮಾಣದ ಕನಸು ನನಸಾದರೆ, ಶಾಶ್ವತವಾಗಿ ನಮಗೆ ಸಮಸ್ಯೆ ಬಗೆಹರಿದಂತೆ ಆಗುತ್ತದೆ' ಎಂದು ಮನವಿ ಮಾಡಿಕೊಂಡರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, "ಸಮಸ್ಯೆ ಬಗ್ಗೆ ಗಮನಕ್ಕೆ ತಂದ ತಕ್ಷಣ ಊರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆ. ಗ್ರಾಮಸ್ಥರ ಅನುಕೂಲಕ್ಕಾಗಿ ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿ ಈಗ ತಾತ್ಕಾಲಿಕವಾಗಿ ಬೋಟ್ ವ್ಯವಸ್ಥೆ ಮಾಡಿದ್ದೇವೆ. ಹಾಗಾಗಿ, ಸದ್ಯಕ್ಕೆ ಎಸ್ಡಿಆರ್ಎಫ್ ತಂಡ ನಿಂಗಾಪುರದಲ್ಲಿ ಇರಲಿದ್ದು, ಬೋಟ್ ನಿರ್ವಹಣೆ ಮಾಡಲಿದ್ದಾರೆ. ಆದಷ್ಟು ಬೇಗನೇ ಕಿರು ಸೇತುವೆ ನಿರ್ಮಿಸುವ ಕೆಲಸ ಮಾಡುತ್ತೇವೆ" ಎಂದು ಭರವಸೆ ನೀಡಿದರು.
ವಿದ್ಯಾರ್ಥಿ ಶಿವಯ್ಯ ನಿಂಗಾಪುರಮಠ ಮಾತನಾಡಿ, "ಈಟಿವಿ ಭಾರತಕ್ಕೆ ಧನ್ಯವಾದ ಸಲ್ಲಿಸಿ, ಎಸ್ಡಿಆರ್ಎಫ್ ಬೋಟ್ ಊರಿಗೆ ಬಂದಿದೆ. ನಮಗೆ ತುಂಬಾ ಖುಷಿ ಆಗುತ್ತಿದೆ. ಇದು ಇಷ್ಟಕ್ಕೆ ನಿಲ್ಲಬಾರದು. ಮುಂದಿನ ದಿನಗಳಲ್ಲಿ ಸೇತುವೆ ಒಂದು ಕಟ್ಟಿ ಕೊಡಿ" ಎಂದು ಕೋರಿದರು.
ಇದನ್ನೂ ಓದಿ: ತುಂಬಿದ ಇದ್ರಮ್ಮನ ಕೆರೆ; ಜೀವ ಕೈಯಲ್ಲಿ ಹಿಡಿದು ಟೈರ್ ಟ್ಯೂಬ್ ಮೇಲೆ ಮಕ್ಕಳ ಸಂಚಾರ - Children Crossing Lake