ದೊಡ್ಡಬಳ್ಳಾಪುರ: ತಮ್ಮನ ಮೇಲಿನ ದ್ವೇಷಕ್ಕೆ ಆತನ ಮನೆಯನ್ನು ಅಣ್ಣ ಜೆಸಿಬಿ ಯಂತ್ರದಿಂದ ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಮನೆಯ ಭಾಗಾಂಶ ನೀಡುವ ವಿಚಾರಕ್ಕೆ ಅಣ್ಣ-ತಮ್ಮನ ನಡುವೆ ಜಗಳ ನಡೆಯುತ್ತಿತ್ತು. ಈ ವಿವಾದ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಮನೆ ಕೆಡವಿದ ಅಣ್ಣನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಸಂಪೂರ್ಣ ವಿವರ: ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ಮಾರ್ಚ್ 26ರ ಮಧ್ಯಾಹ್ನ ಘಟನೆ ನಡೆದಿದೆ. ಅಣ್ಣ ಸಂಪತ್ ಕುಮಾರ್ ಮತ್ತು ತಮ್ಮ ಶ್ರೀನಿವಾಸ್ ನಡುವೆ ನಿವೇಶನ ವಿವಾದವಿದ್ದು, ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದಲ್ಲಿ ವಿವಾದ ವಿಚಾರಣೆಗೆ ಬಾಕಿಯಿದ್ದರೂ ಸಂಪತ್ ಕುಮಾರ್ ಜೆಸಿಬಿಯಿಂದ ಮನೆ ಧ್ವಂಸ ಮಾಡಿದ್ದಾರೆ ಎಂದು ಶ್ರೀನಿವಾಸ್ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಶ್ರೀನಿವಾಸ್ ಅವರ ಪತ್ನಿ ಭಾಗ್ಯಲಕ್ಷ್ಮೀ, "ನ್ಯಾಯಾಲಯದಲ್ಲಿ ಈ ಕುರಿತು ಅರ್ಜಿ ಹಾಕಿದ್ದೇವೆ. ಸಂಪತ್ ಕುಮಾರ್ ಪ್ರತಿನಿತ್ಯ ನಮ್ಮ ಮನೆ ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಈ ಕುರಿತು ನ್ಯಾಯ ಒದಗಿಸುವಂತೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ. ಮನೆಯ ದಿವಾನ, ಕುರ್ಚಿ, ಬೀರು ಸೇರಿದಂತೆ ಹಲವು ಪೀಠೋಪಕರಣಗಳು ಹಾಗೂ ಮನೆ ಕಿಟಕಿ ಬಾಗಿಲು, ಟೈಲ್ಸ್ ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಕನಿಷ್ಠ ಪಕ್ಷ ಮಾಹಿತಿ ನೀಡಿದ್ದರೆ ನಾವು ಅವುಗಳನ್ನು ಉಳಿಸಿಕೊಳ್ಳುತ್ತಿದ್ದೆವು" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀನಿವಾಸ್ ಮಾತನಾಡಿ, "ಸಹೋದರನ ಮೋಸದಿಂದ ನಾವು ಇಂದು ಬೀದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ನಮ್ಮ ಭಾಗದ ಮನೆಯನ್ನು ನಮ್ಮಿಂದ ಮೋಸ ಹಾಗೂ ದೌರ್ಜನ್ಯದ ಮೂಲಕ ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಮಗೆ ನ್ಯಾಯಕೊಡಿ" ಎಂದರು.
ಇದನ್ನೂ ಓದಿ: ತೋಟಕ್ಕೆ ಕುಡಿಯುವ ನೀರು ಬಳಸಿದ ಆರೋಪ: ಗ್ರಾ.ಪಂ ಕಾರ್ಯದರ್ಶಿ ವಿರುದ್ಧ ಎಫ್ಐಆರ್ - Drinking Water Misuse