ಬೆಳಗಾವಿ: ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್, ತಮ್ಮ ತಾಯಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಚಿಕ್ಕೋಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೆಬ್ ಜೊಲ್ಲೆ ಹಾಗು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ತಮ್ಮ ಮತ ಚಲಾಯಿಸಿದರು.
ಹಿಂಡಲಗಾದ ವಿಜಯನಗರದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 61ರಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬಸಮೇತರಾಗಿ ಬಂದು ಮತ ಚಲಾಯಿಸಿದರು.
ಬಳಿಕ ಮಾತನಾಡಿದ ಅವರು, "ಈ ಬಾರಿ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಯಾಗುವುದು ನಿಶ್ಚಿತ. ಸಹೋದರ ಚನ್ನರಾಜ, ಎಲ್ಲ ಕಾಂಗ್ರೆಸ್ ಮುಖಂಡರು ಮತ್ತು ನನ್ನ ಅಜ್ಜ, ಮತದಾರರು ಮತ್ತು ನಮ್ಮ ಶಾಸಕರು ನನ್ನ ಶಕ್ತಿ. ಮಾವ, ಅಳಿಯ ಜೋಡಿ ಖಂಡಿತವಾಗಲೂ ಹಿಟ್ ಆಗುತ್ತದೆ" ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಮಾತನಾಡಿ, "ಕುಟುಂಬ ಸಮೇತರಾಗಿ ಆಗಮಿಸಿ ಮತದಾನದ ಹಕ್ಕು ಚಲಾಯಿಸಿದ್ದೇವೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಇದು ನಮ್ಮ ಹಕ್ಕು. ದೇಶ ಕಟ್ಟಲು ಮತ್ತು ಒಳ್ಳೆಯ ಸರ್ಕಾರ ಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ಮತ ಹಾಕಬೇಕು. ಬಹಳ ಒಳ್ಳೆಯ ವಾತಾವರಣ ಕ್ಷೇತ್ರದಲ್ಲಿದೆ. ಈ ಬಾರಿ ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ" ಎಂದರು.
ಪ್ರಿಯಾಂಕಾ ಜಾರಕಿಹೊಳಿ ಮತ ಚಲಾವಣೆ: ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಹುಕ್ಕೇರಿ ತಾಲೂಕಿನ ಹಳೆ ವಂಟಮೂರಿ ಗ್ರಾಮದ ಮತಗಟ್ಟೆ 95ರಲ್ಲಿ ಸರತಿ ಸಾಲಿನಲ್ಲಿ ನಿಂತು ವೋಟ್ ಹಾಕಿದರು.
ದೇಶದೆಲ್ಲೆಡೆ ಪ್ರಜಾಪ್ರಭುತ್ವದ ಹಬ್ಬ-ಅಣ್ಣಾಸಾಹೆಬ್ ಜೊಲ್ಲೆ: ಯಕ್ಸಂಬಾ ಪಟ್ಟಣದ ಮತಗಟ್ಟೆ ಸಂಖ್ಯೆ 28ರಲ್ಲಿ ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು, "ಮೂರನೇ ಬಾರಿ ಮೋದಿ ಪ್ರಧಾನಿಯಾಗುವುದು ಶತಸಿದ್ಧ. ಬಿಸಿಲಿದ್ದರೂ ಸಹ ಜನತೆ ಉತ್ಸಾಹದಿಂದ ಬಂದು ಮತದಾನ ಮಾಡುತ್ತಿದ್ದಾರೆ. ಯುವಕ, ಯುವತಿಯರೊಂದಿಗೆ ವಯೋವೃದ್ಧರು, ಮಹಿಳೆಯರು ಮತದಾನ ಮಾಡುತ್ತಿದ್ದಾರೆ" ಎಂದು ಹೇಳಿದರು.