ಮೈಸೂರು: ಎಚ್ ಡಿ ದೇವೇಗೌಡರ ಬಗ್ಗೆ ಯಾರೂ ಮಾತನಾಡಬಾರದು, ಅಂತಹ ನೈತಿಕತೆ ಯಾರಿಗೂ ಇಲ್ಲ, ಜೊತೆಗೆ ಮೈಸೂರಿನಲ್ಲಿ ಯದುವೀರ್ ಹಾಗೂ ಮಂಡ್ಯದಿಂದ ಕುಮಾರಸ್ವಾಮಿ ಗೆಲ್ಲಿಸಿ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮನವಿ ಮಾಡಿದರು.
ಇಂದು ಮೈಸೂರಿನ ಕೆ ಆರ್ ನಗರದ ಎಚ್ ವಿಶ್ವನಾಥ್ ಅವರ ಮನೆಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತಾನಾಡಿದ ಅವರು, ಎಚ್ ಡಿ ಕುಮಾರಸ್ವಾಮಿ ನಮ್ಮೂರಿಗೆ ಹಾಗೂ ನಮ್ಮ ಮನೆಗೆ ಬಂದಿರುವುದು ವಿಶೇಷ. ನನ್ನ ರಾಜಕೀಯ ಜೀವನದಲ್ಲಿ ಅಪರೂಪದ ಸಂದರ್ಭ ಎಂದು ತಿಳಿಸಿದರು.
ರಾಜಕಾರಣದಲ್ಲಿ ಟೀಕೆ, ಮಾತು, ಸಂಘರ್ಷ, ಸಹಜ. ಅದನ್ನ ಸರಿ ಮಾಡಿಕೊಂಡು ಹೋಗುವುದು ಅನಿವಾರ್ಯ. ಈ ನೆಲದಿಂದ ಗೆದ್ದು ಭಾರತದ ಪ್ರಧಾನಿ ಆಗುವುದು ಸುಲಭದ ಸಾಧನೆಯಲ್ಲ. ನನ್ನ ಕಷ್ಟದ ಸಂದರ್ಭದಲ್ಲೂ ನನ್ನ ಜೊತೆಗೆ ಇದ್ದವರು, ನಮ್ಮ ಭಿನ್ನಾಭಿಪ್ರಾಯ ಚಾಮುಂಡಿ ಬೆಟ್ಟದವರೆಗೂ ಹೋಗಿತ್ತು. ರಾಜಕೀಯ ಧ್ರುವೀಕರಣ ಸಂದರ್ಭದಲ್ಲಿ ಯಾರನ್ನು ಬೆಂಬಲಿಸಬೇಕು ಎನ್ನುವುದೇ ಸವಾಲು. ಈಗ ಬಿಜೆಪಿ-ಜೆಡಿಎಸ್ ಒಂದಕ್ಕೊಂದು ಒಂದಾಗಿ ಮೋದಿ ಅವರನ್ನ ಪ್ರಧಾನಿ ಮಾಡಲು ಸಜ್ಜಾಗಿದೆ. ನಾನು ಜೆಡಿಎಸ್-ಬಿಜೆಪಿ ಹಾಗೂ ಕಾಂಗ್ರೆಸ್ ಗೆ ವಿಷಯಾಧಾರಿತ ಮೇಲೆ ಬೆಂಬಲ ನೀಡಿದ್ದೇನೆ. ಅದೆಲ್ಲವನ್ನೂ ಮರೆತು ಕುಮಾರಸ್ವಾಮಿ ಅವರು ನಮ್ಮ ಮನೆಗೆ ಬಂದಿರುವುದು ಸಂತೋಷ ಎಂದು ವಿಶ್ವನಾಥ್ ಹರ್ಷ ವ್ಯಕ್ತಪಡಿಸಿದರು.
7 ಜನ ಮಂತ್ರಿ ಮಕ್ಕಳಿಗೆ ಟಿಕೆಟ್: ರಾಜವಂಶಸ್ಥ ಕುಡಿ ಪ್ರಜಾಪ್ರಭುತ್ವದಲ್ಲಿ ಪ್ರತಿನಿಧಿಯಾಗಲು ಸ್ಪರ್ಧೆ ಮಾಡಿದ್ದಾರೆ, ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದು, ಇಬ್ಬರೂ ಗೆಲ್ಲಬೇಕು. ಸಿದ್ದರಾಮಯ್ಯ ಬರೀ ಮಾತಿಗೆ ಕುಟುಂಬ ರಾಜಕಾರಣ ಎಂದು ಹೇಳುತ್ತಾರೆ. ಕಾಂಗ್ರೆಸ್ ನಲ್ಲಿ 13 ಜನ ಮಕ್ಕಳು ಕುಟುಂಬ ರಾಜಕಾರಣದಿಂದ ಟಿಕೆಟ್ ಪಡೆದಿದ್ದಾರೆ. ಅದರಲ್ಲಿ 7 ಜನ ಮಂತ್ರಿ ಮಕ್ಕಳು ಟಿಕೆಟ್ ಪಡೆದಿದ್ದಾರೆ ಎಂದರು.
ಯಾರೇ ಆದರೂ ಕುಮಾರಸ್ವಾಮಿ ಅವರ ಬಗ್ಗೆ ಆಡಳಿತಾತ್ಮಕವಾಗಿ ಟೀಕೆ ಮಾಡಲಿ. ಆದರೆ ಎಚ್ ಡಿ ದೇವೇಗೌಡರ ಬಗ್ಗೆ ಯಾವುದೇ ಕಾರಣಕ್ಕೂ ಮಾತನಾಡಬಾರದು, ಅಂತಹ ನೈತಿಕತೆ ಯಾರಿಗೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ತಮ್ಮ ಮಗನನ್ನು ನಿಲ್ಲಿಸಬೇಕು ಅಂದುಕೊಂಡಿದ್ದರು. ಕಾಂಗ್ರೆಸ್ ಪಟ್ಟಿಯಲ್ಲಿ ನನ್ನ ಹೆಸರು ಸಹ ಇತ್ತು. ಆದರೆ ಸರ್ವೇ ರಿಪೋರ್ಟ್ ಬಂದ ಮೇಲೆ ಪಾಪ ಲಕ್ಷ್ಮಣ್ ಅವರಿಗೆ ಟಿಕೆಟ್ ಕೊಟ್ಟರು. ಆ ಮೂಲಕ ಒಕ್ಕಲಿಗರಿಗೆ ಅಪಮಾನ ಮಾಡುತ್ತಾ ಇದ್ದಾರೆ ಎಂದು ಆರೋಪಿಸಿದರು.
ಇದನ್ನೂಓದಿ:ಈ ಸರ್ಕಾರ ಬಹಳ ದಿನ ಇರುವುದಿಲ್ಲ: ಹೆಚ್ ಡಿ ಕುಮಾರಸ್ವಾಮಿ - Lok Sabha Election 2024