ಬೆಂಗಳೂರು: ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳ ಬೃಹತ್ ಆರ್ಥಿಕ ಹೊರೆ ಮಧ್ಯೆ ಅಭಿವೃದ್ಧಿ ಕೆಲಸದ ಮೂಲಕ ಸಮತೋಲನ ಕಾಪಾಡಲು ಕಸರತ್ತು ನಡೆಸುತ್ತಿದೆ. ಮೊದಲ ತ್ರೈಮಾಸಿಕದಲ್ಲಿ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕೆಲಸಗಳಿಗಾಗಿ ಮಾಡಿರುವ ಬಂಡವಾಳ ವೆಚ್ಚ ಅತ್ಯಲ್ಪವಾಗಿದೆ.
ಪಂಚ ಗ್ಯಾರಂಟಿಗಾಗಿ 2024-25 ಸಾಲಿನಲ್ಲಿ ಸರ್ಕಾರ ಸುಮಾರು 52,000 ಕೋಟಿ ರೂ. ಮೀಸಲಿರಿಸಿದೆ. 2024-25 ಸಾಲಿಗೆ ಸಿದ್ದರಾಮಯ್ಯ ಸರ್ಕಾರ ಒಟ್ಟು 3.71 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದೆ. ಬಜೆಟ್ನಲ್ಲಿ 1,05,246 ಕೋಟಿ ರೂ. ಸಾಲ ಮಾಡಲು ಅಂದಾಜಿಸಿದೆ. ಸಾಲದ ಮೊತ್ತವನ್ನು ಬಹುತೇಕ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗಿಸುವ ಬಂಡವಾಳ ವೆಚ್ಚಕ್ಕೆ ಬಳಸಲಾಗತ್ತದೆ. ಆದರೆ, 2024-25ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಮಾಡಿರುವ ಬಂಡವಾಳ ವೆಚ್ಚ ಅತ್ಯಲ್ಪವಾಗಿದೆ.
ತ್ರೈಮಾಸಿಕದಲ್ಲಿ ಅತ್ಯಲ್ಪ ಬಂಡವಾಳ ವೆಚ್ಚ: ರಾಜ್ಯದ ಅಭಿವೃದ್ಧಿ ಕೆಲಸಗಳು, ಮೂಲ ಸೌಕರ್ಯ ಕಾಮಗಾರಿಗಳ ಕೆಲಸಗಳಿಗೆ ಮಾಡುವ ಖರ್ಚನ್ನು ಬಂಡವಾಳ ವೆಚ್ಚ ಎನ್ನಲಾಗುತ್ತದೆ. ಅಧಿಕ ಬಂಡವಾಳ ವೆಚ್ಚ ಮಾಡಿದರೆ ಅಭಿವೃದ್ಧಿ ಕೆಲಸ ಹೆಚ್ಚು ನಡೆಯುತ್ತಿವೆ ಎಂದರ್ಥ. ಇತ್ತ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2024-25ರ ಸಾಲಿನಲ್ಲಿ ಬಂಡವಾಳ ವೆಚ್ಚಕ್ಕಾಗಿ ಬಜೆಟ್ನಲ್ಲಿ 55,877 ಕೋಟಿ ರೂ. ಹಣ ಮೀಸಲಿರಿಸಿದೆ.
ಆದರೆ, ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಮಾಡಿರುವ ಬಂಡವಾಳ ವೆಚ್ಚ ಅತ್ಯಲ್ಪವಾಗಿದೆ. ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಬಂಡವಾಳ ವೆಚ್ಚದ ರೂಪದಲ್ಲಿ ಕೇವಲ 4,606 ಕೋಟಿ ರೂ. ಮಾತ್ರ ಖರ್ಚು ಮಾಡಿದೆ. ಆರ್ಥಿಕ ಇಲಾಖೆ ನೀಡಿರುವ ಮೊದಲ ತ್ರೈಮಾಸಿಕದ ಜಮೆ ವೆಚ್ಚಗಳ ಅಂಕಿ-ಅಂಶದಂತೆ ಕೇವಲ 8.24% ಮಾತ್ರ ಬಂಡವಾಳ ವೆಚ್ಚ ಮಾಡಿದೆ.
ರಾಜಸ್ವ ಜಮೆಯಲ್ಲಿ ಬಹುತೇಕ ಹಣ ಪಂಚ ಗ್ಯಾರಂಟಿ ಸೇರಿದಂತೆ ವೇತನ, ಪಿಂಚಣಿ, ಸಹಾಯಧನ ಒಳಗೊಂಡ ಬದ್ಧತಾ ವೆಚ್ಚಕ್ಕೆ ವಿನಿಯೋಗವಾಗುತ್ತಿದೆ. ಮೊದಲ ತ್ರೈಮಾಸಿಕದಲ್ಲಿ ಒಟ್ಟು 60,076 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಈ ಪೈಕಿ ಒಟ್ಟು ರಾಜಸ್ವ ವೆಚ್ಚ (ಪಂಚ ಗ್ಯಾರಂಟಿ, ವೇತನ, ಪಿಂಚಣಿ, ಬಡ್ಡಿ ಪಾವತಿ ಸೇರಿದಂತೆ ಒಟ್ಟು ಬದ್ಧತಾ ವೆಚ್ಚ) 62,108 ಕೋಟಿ ರೂ. ಆಗಿದೆ. ಬಂಡವಾಳ ವೆಚ್ಚ 4,606 ಕೋಟಿ ಸೇರಿ ಮೊದಲ ತ್ರೈಮಾಸಿಕದಲ್ಲಿ ಒಟ್ಟು 66,714 ಕೋಟಿ ರೂ. ರಾಜಸ್ವ ವೆಚ್ಚ ಮಾಡಿದೆ ಎಂದು ಇಲಾಖೆ ತಿಳಿಸಿದೆ.
ಬಂಡವಾಳ ವೆಚ್ಚಕ್ಕೆ ಸಾಲದ ಮೊರೆ: ಮೊದಲ ತ್ರೈಮಾಸಿಕದಲ್ಲಿ ಸರ್ಕಾರ ವಿವಿಧ ತೆರಿಗೆ ಮೂಲಗಳಿಂದ ಬಂದ ರಾಜಸ್ವ ಸಂಗ್ರಹವನ್ನು ಪಂಚ ಗ್ಯಾರಂಟಿಗಳೊಳಗೊಂಡ ಬದ್ಧ ವೆಚ್ಚಕ್ಕೇ ಖರ್ಚು ಮಾಡುತ್ತಿದೆ. ಪಂಚ ಗ್ಯಾರಂಟಿಗಳಿಗಾಗಿ ಮೊದಲ ತ್ರೈಮಾಸಿಕದಲ್ಲಿ ಸುಮಾರು 19,100 ಕೋಟಿ ರೂ. ಹಣ ವ್ಯಯಿಸಲಾಗಿದೆ. ಬಂಡವಾಳ ವೆಚ್ಚಕ್ಕೆ ಸಾಲದ ಹಣವನ್ನು ಬಹುವಾಗಿ ಬಳಸಲಾಗುತ್ತಿದೆ. ಮೊದಲ ತ್ರೈಮಾಸಿಕದಲ್ಲಿ ಸರ್ಕಾರ ಒಟ್ಟು 2,280 ಕೋಟಿ ರೂ. ಸಾರ್ವಜನಿಕ ಸಾಲ ಮಾಡಿದೆ. ಈ ಸಾಲದ ಹಣವನ್ನು ಬಂಡವಾಳ ವೆಚ್ಚಕ್ಕೆ ಬಳಸಲಾಗುತ್ತಿದೆ.
ರಾಜ್ಯ ಸರ್ಕಾರ ಆರ್ಥಿಕ ವರ್ಷದ ಮೊದಲ ತಿಂಗಳು ಏಪ್ರಿಲ್ನಲ್ಲಿ 2,027 ಕೋಟಿ ರೂ. ಬಂಡವಾಳ ವೆಚ್ಚದ ಮೇಲೆ ಖರ್ಚು ಮಾಡಿತ್ತು. ಮೇ ತಿಂಗಳಲ್ಲಿ 585 ಕೋಟಿ ರೂ. ಮಾತ್ರ ಬಂಡವಾಳ ವೆಚ್ಚದ ರೂಪದಲ್ಲಿ ಖರ್ಚು ಮಾಡಿದೆ. ಅದೇ ಜೂನ್ ತಿಂಗಳಲ್ಲಿ 1,993 ಕೋಟಿ ರೂ. ಬಂಡವಾಳ ವೆಚ್ಚ ಮಾಡಿರುವುದಾಗಿ ಆರ್ಥಿಕ ಇಲಾಖೆ ಅಂಕಿ-ಅಂಶ ನೀಡಿದೆ. ಅಂದರೆ, ರಾಜಸ್ವ ಸಂಗ್ರಹದಲ್ಲಿ ಬಹುತೇಕ ಎಲ್ಲಾ ಹಣ ಪಂಚ ಗ್ಯಾರಂಟಿ ಹಾಗೂ ಬದ್ಧವೆಚ್ಚಕ್ಕೇ ವಿನಿಯೋಗ ಆಗುತ್ತಿದ್ದು, ಬಂಡವಾಳ ವೆಚ್ಚಕ್ಕೆ ಸಾರ್ವಜನಿಕ ಸಾಲದ ಸೀಮಿತ ಹಣ ಲಭ್ಯವಾಗುತ್ತಿದೆ. ಹೀಗಾಗಿ, ಬಂಡವಾಳ ವೆಚ್ಚದ ಮೇಲಿನ ಖರ್ಚು ಅತ್ಯಲ್ಪವಾಗಿರುವುದು ಅಂಕಿ-ಅಂಶದಿಂದ ಸ್ಪಷ್ಟವಾಗುತ್ತಿದೆ.
ಇದನ್ನೂ ಓದಿ: ಬಿಜೆಪಿ ಅವಧಿಯ ಅಕ್ರಮ ಆರೋಪಗಳ ತನಿಖೆ ಚುರುಕಿಗೆ ಐವರು ಸಚಿವರ ಸಮಿತಿ ರಚನೆ - Five Ministers Committee