ಬೆಂಗಳೂರು: ಕಲ್ಲು ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಸಂಚಿತ ಆಡಿಟ್ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಉಪ ಖನಿಜವನ್ನು ತೆಗೆದು ರಾಜಧನ ಪಾವತಿಸದೆ ಸಾಗಾಣಿಕೆ ಮಾಡಿರುವ ಹಾಗೂ ಗುತ್ತಿಗೆ ಪ್ರದೇಶಕ್ಕೆ ಹೊಂದಿಕೊಂಡಂತೆ ಒತ್ತುವರಿ ಮಾಡಿರುವ ಸಂಬಂಧ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ವಿಧಿಸಿರುವ ಒನ್ ಟೈಂ ಸೆಟಲ್ಮೆಂಟ್ (OTS) ಮೂಲಕ ದಂಡ ಶುಲ್ಕ ಪಾವತಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಮಾಹಿತಿ ನೀಡಿದರು.
'ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ)ನಿಯಮಗಳು, 2024'ಕ್ಕೆ ಅನುಮೋದನೆ ನೀಡಲಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆ ವಿಚಾರದ ಬಗ್ಗೆ ಚರ್ಚೆಯಾಗಿದೆ. ರಾಯಲ್ಟಿ ಪರಿಷ್ಕರಣೆ ಮಾಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದರಿಂದ ಸರ್ಕಾರದ ಆದಾಯವೂ ಹೆಚ್ಚಳವಾಗುತ್ತದೆ. ಗ್ಯಾರಂಟಿಗಳಿಗೆ ಹಣದ ಕೊರತೆಯಿಲ್ಲ. ಆದರೆ, ಅಭಿವೃದ್ಧಿ ಕೆಲಸಗಳು ಆಗಬೇಕಲ್ಲ, ಹಾಗಾಗಿ ರಾಯಲ್ಟಿ ತೆರಿಗೆ ಹಾಕಲಾಗಿದೆ ಎಂದು ಅವರು ತಿಳಿಸಿದರು.
ಕಟ್ಟಡ ಕಲ್ಲು, ಮೈನಿಂಗ್ ಕಲ್ಲು ಪ್ರತಿ ಟನ್‌ಗೆ 80 ರೂ. ರಾಯಲ್ಟಿ ನಿಗದಿಪಡಿಸಲಾಗಿದೆ. ಈ ಹಿಂದೆ ಟನ್‌ಗೆ 70 ರೂ. ಇತ್ತು. ರಾಯಲ್ಟಿ ಪಾವತಿಸದೆ ಖನಿಜ ಸಾಗಣೆ ಮಾಡಿದರೆ ದಂಡ ವಸೂಲಿಗೆ ತೀರ್ಮಾನಿಸಲಾಗಿದೆ. ಗಣಿಗಾರಿಕೆ ಮಾಲೀಕರು ಕಳೆದ ಆರೇಳು ವರ್ಷಗಳಿಂದ ದಂಡ ವಸೂಲಿಯಾಗದೆ 6,105 ಕೋಟಿ ರೂ. ಬಾಕಿ ಉಳಿದಿದೆ. ಹೀಗಾಗಿ, ಒನ್ ಟೈಮ್ ಸೆಟ್ಲಮೆಂಟ್ ಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಡಿಜಿಟಲ್ ಮಾಡಿದ ಮೇಲೆ ಎನ್ಕ್ರೋಚ್ ಸಾಧ್ಯವಾಗುತ್ತಿಲ್ಲ. ಒನ್ ಟೈಮ್ ಸೆಟ್ಲಮೆಂಟ್ಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು 1221 ಕೋಟಿ ರೂ. ರಾಯಲ್ಟಿ ಎಂದು ಪರಿಗಣಿಸಲಾಗಿದೆ ಎಂದರು.
ಖನಿಜಗಳನ್ನು ಹೊಂದಿರುವ ಭೂಮಿಗೆ ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ. ಯಾವುದೇ ಖನಿಜಗಳನ್ನು ಹೊಂದಿರಬಹುದು. ಅಂತಹ ಭೂಮಾಲೀಕರು ತೆರಿಗೆ ಪಾವತಿಸಬೇಕಾಗುತ್ತದೆ. ಬಾಕ್ಸೈಟ್, ಕ್ರೋಮ್ ಮತ್ತಿತರ ಖನಿಜ ಇರುವ ಭೂಮಿ ಒಂದು ಟನ್‌ಗೆ 100 ರೂ. ರಾಯಲ್ಟಿ ಹಾಕಲಾಗುವುದು. ಈ ತೆರಿಗೆಯನ್ನು ಭೂ ಮಾಲೀಕರು ಕಟ್ಟಬೇಕಿದೆ. ಆ ಖನಿಜದ ಹಕ್ಕುಗಳು ಭೂ ಮಾಲೀಕರಿಗೆ ಸೇರುತ್ತದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2022-23 ನೇ ಸಾಲಿನ ಎಸ್.ಸಿ.ಪಿ/ ಟಿ.ಎಸ್ ಪಿ ಲಭ್ಯವಿರುವ ಸಾಲಿನ ಟಿ.ಎಸ್.ಪಿ ಯೋಜನೆಯಡಿ 42.66 ಕೋಟಿ ರೂ.ಗಳ ಮೊತ್ತದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ವಸತಿ ಶಾಲೆಗಳು ಹಾಗೂ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಟೂ ಟಯರ್ ಮಂಚಗಳು, ನಾರಿನ ಹಾಸಿಗೆಗಳು ಹಾಗೂ ವಿದ್ಯುತ್ ಹೀಟ್ ಪಂಪ್‌ಗಳನ್ನು ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2024-25ನೇ ಸಾಲಿನ ಕ್ರಿಯಾ ಯೋಜನೆಯಂತೆ, ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿಯಿಂದ ಯಡ್ರಾಮಿವರೆಗೆ 53.42 ಕಿ.ಮೀ ಯಿಂದ 63.42 ವರೆಗೆ ರಸ್ತೆ ಸುಧಾರಣೆ ಕಾಮಗಾರಿಯನ್ನು 25.00 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಆಯ್ದ ರಾಜ್ಯ ಸ್ವಾಮ್ಯದ ಸಾರ್ವಜನಿಕ ವಲಯ ಉದ್ದಿಮೆಗಳು (PSU) ಅಂತರ್ ನಿಗಮ ಠೇವಣಿಗಳನ್ನು (Inter Corporate Deposit) ಅನುಷ್ಠಾನಗೊಳಿಸುವ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ ಚರ್ಚೆ ಮಾಡಲಾಗಿದೆ. ಇದರಿಂದ ಶೇ. 2 ರಷ್ಟು ಬಡ್ಡಿ ಉಳಿಯುತ್ತದೆ. ಯಾರಿಗೆ ಅತ್ಯಂತ ಅಗತ್ಯವಾಗಿ ಹಣ ಬೇಕಿರುತ್ತದೋ ಅವರಿಗೆ ಅನುಕೂಲವಾಗುತ್ತದೆ ಎಂದು ಸಚಿವರು ವಿವರಿಸಿದರು.
ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದ ಇತರ ವಿಷಯಗಳು:
- 'ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಮತ್ತು ಸಂರಕ್ಷಣೆ (ತಿದ್ದುಪಡಿ) ವಿಧೇಯಕ, 2024' ಅನುಮೋದನೆ ನೀಡಲು ಸಂಪುಟ ಒಪ್ಪಿಗೆ ನೀಡಲಾಗಿದೆ.
- 2024-25ನೇ ಸಾಲಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಉಚಿತ ರೋಗ ಪತ್ತೆ ಮತ್ತು ಉಚಿತ ಔಷಧಿ ಸೇವೆಗಳ (NFDS) ಕಾರ್ಯಕ್ರಮದ ಅಡಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಹಾಗೂ ರಾಜ್ಯ ಮಟ್ಟದ ಆಸ್ಪತ್ರೆಗಳಲ್ಲಿನ ಪ್ರಯೋಗಾಲಯಗಳಿಗೆ reagents. consumables & rapid diagnostic kitsಗಳನ್ನು 19.70 ಕೋಟಿ ರೂ.ಗಳ ವೆಚ್ಚದಲ್ಲಿ ಖರೀದಿಸಿ ಸರಬರಾಜು ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
- ವಿಶ್ವಬ್ಯಾಂಕ್ ನೆರವಿನೊಂದಿಗೆ 2500 ಕೋಟಿ ರೂ.ಗಳ ವೆಚ್ಚದಲ್ಲಿ (ವಿಶ್ವಬ್ಯಾಂಕ್ 1750.00 ಕೋಟಿ ರೂ.ಗಳು, ರಾಜ್ಯ ಸರ್ಕಾರ 750.00 ಕೋಟಿ ರೂ.ಗಳು) ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಲವರ್ಧನೆಗೊಳಿಸುವ ಬಾಹ್ಯ ನಿಧಿಯಿಂದ ಪಡೆದುಕೊಳ್ಳಲು ಒಪ್ಪಿಗೆ ಪಡೆದಿದೆ.
- 'ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ನಿಬಂಧನೆ ಮತ್ತು ಷರತ್ತುಗಳು) (ತಾಂತ್ರಿಕ ಶಿಕ್ಷಣ) (ತಿದ್ದುಪಡಿ) ನಿಯಮಗಳು, 2024' ಅನುಮೋದನೆ ನೀಡಲಾಗಿದೆ.
- 'ಕರ್ನಾಟಕ ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ನಿಯಮಗಳು, 2024'ಕ್ಕೆ ಅನುಮೋದನೆ ನೀಡಲಾಗಿದೆ.
- ರಾಷ್ಟ್ರೀಯ ಹೆದ್ದಾರಿ 207 ಹೊಸಕೋಟಿ ತಾಲೂಕಿನ ಕೊರಳೂರು ಗ್ರಾಮದಲ್ಲಿ ಕಿ.ಮೀ. 48.30ರಲ್ಲಿ ಹಾಲಿ ಇರುವ ಎಲ್.ಸಿ 130ರ ಬದಲಾಗಿ ರೈಲ್ವೆ ಮೇಲುಸೇತುವೆ ನಿರ್ಮಾಣ ಕಾಮಗಾರಿಯ 97.27 ಕೋಟಿ ರೂ.ಗಳ (ಕೇಂದ್ರ 43.02 ಕೋಟಿ ರೂ.ಗಳು, ರಾಜ್ಯ 54.25 ಕೋಟಿ ರೂ.ಗಳು) ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲು ಒಪ್ಪಿಗೆ ನೀಡಲಾಗಿದೆ.
- ಬೆಂಗಳೂರಿನ ಸಂಪಂಗಿರಾಮ ನಗರದಲ್ಲಿ ಸಮಾಜ ಕಲ್ಯಾಣ ಭವನ ನಿರ್ಮಾಣ ಕಾಮಗಾರಿಯ 40.50 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 2024-25ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ವಸತಿ ಶಾಲೆ/ ಮೆಟ್ರಿಕ್ ಪೂರ್ವ ಮತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿನ ವಸತಿ ಶಾಲೆ/ಕಾಲೇಜುಗಳ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರವನ್ನು 43.95 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಿ ಒದಗಿಸುವ ಬಗ್ಗೆ ಅನುಮೋದನೆ.
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ತುರ್ತು ಅಭಿವೃದ್ಧಿ ಕಾಮಗಾರಿಗಳ 694.00 ಕೋಟಿ ರೂ.ಗಳ ಪರಿಷ್ಕೃತ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ, ನ.22 ರಂದು ಹೊರಡಿಸಿರುವ ಸರ್ಕಾರಿ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ.
ಇದನ್ನೂ ಓದಿ: ಸಂಪುಟ ಸಭೆಯಲ್ಲಿ 9 ವಿಧೇಯಕಗಳಿಗೆ ಅನುಮೋದನೆ: ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಮಸೂದೆ ಮಂಡನೆಗೆ ಅಸ್ತು