ಬೆಂಗಳೂರು: ''ಕೆಲವು ಮುಖಂಡರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಕಳಂಕ ತರುವ ಕೆಲಸ ಮಾಡಿದ್ದಾರೆ. ಅದರಲ್ಲೂ ರಾಜ್ಯ ಸರ್ಕಾರ ತುಂಬಾ ಕೀಳಾಗಿ ನಡೆದುಕೊಳ್ಳುತ್ತಿದೆ. ಈ ಬಗ್ಗೆ ಇಂದಿನಿಂದ (ಮಂಗಳವಾರ) ನಾವು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ'' ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದ್ದಾರೆ.
ಪದ್ಮನಾಭನಗರದಲ್ಲಿ ನಿನ್ನೆ (ಸೋಮವಾರ) ರಾತ್ರಿ ದೇವೇಗೌಡರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿದರು.
''ನಮ್ಮ ಪಕ್ಷದ ವತಿಯಿಂದ ನಡೆಸುತ್ತಿರುವ ಪ್ರತಿಭಟನೆಗೆ ಮೈತ್ರಿ ಪಕ್ಷ ಬೆಂಬಲ ಕೊಡಬಹುದು'' ಎಂದರು. ಮುಂದುವರೆದು ಮಾತನಾಡಿ, "ರಾಜ್ಯದಲ್ಲಿ ಹಲವು ಬೆಳವಣಿಗೆಗಳು ನಡೆದಿವೆ. ಇವತ್ತು ನಮ್ಮ ನಾಯಕ ದೇವೇಗೌಡರನ್ನು ಭೇಟಿಯಾಗಿದ್ದೇನೆ. ಆರೋಗ್ಯ ವಿಚಾರಿಸಿದ್ದೇನೆ. ಕೆಲವರು ಮಾಡಿದ ತಪ್ಪಿನಿಂದ ಇಡೀ ರಾಜ್ಯವೇ ತಲೆ ತಗ್ಗಿಸುವ ಕೆಲಸ ಅಂತ ಹೇಳಿದ್ದಾರೆ'' ಎಂದು ತಿಳಿಸಿದರು.
ಸಿಬಿಐ ತನಿಖೆಗೆ ಒತ್ತಾಯ: ''ಪ್ರಜ್ವಲ್ ವಿಚಾರದಲ್ಲಿ ಎಸ್ಐಟಿ ತನಿಖೆ ನಡೆಯುತ್ತಿದೆ. ರಾಜ್ಯ ಸರ್ಕಾರ ಏನೇನೋ ಮಾಡ್ತಿದೆ. ಎಸ್ಐಟಿ ಮೇಲೆ ನಮಗೆ ನಂಬಿಕೆ ಇಲ್ಲ. ಸಿಬಿಐ ತನಿಖೆ ಆಗಬೇಕು'' ಎಂದು ಇದೇ ವೇಳೆ ಅವರು ಒತ್ತಾಯಿಸಿದರು.
''ಪ್ರಜ್ವಲ್ ಬಹುತೇಕ ಯಾರ ಸಂಪರ್ಕಕ್ಕೂ ಸಿಗ್ತಿಲ್ಲ. ಇನ್ನೂ ಹಲವಾರು ವಿಚಾರಗಳಿವೆ. ರಾಜ್ಯ ಸರ್ಕಾರದಿಂದ ನ್ಯಾಯ ಸಿಗಲ್ಲ. ಸುಪ್ರೀಂ ಕೋರ್ಟ್ ಮೂಲಕವೇ ನ್ಯಾಯ ಸಿಗಬೇಕಾಗಿದೆ. ನೂರಕ್ಕೆ ನೂರಷ್ಟು ಭಾಗ ಇದು ರಾಜಕೀಯ ಷಡ್ಯಂತ್ರ'' ಎಂದು ದೂರಿದರು.
ಗೌಡರ ವೇದನೆ ನೋಡಲಾಗುತ್ತಿಲ್ಲ: ''ದೇವೇಗೌಡರ ವೇದನೆ ನೋಡುವುದಕ್ಕೆ ಆಗುತ್ತಿಲ್ಲ. ಪ್ರಧಾನಿ ಮೋದಿ ಅವರಿಗೆ ಕಳಂತ ತರುವ ಕೆಲಸವಾಗಿದೆ. ಎಲ್ಲರೂ ಸೇರಿ ಹೋರಾಟ ಮಾಡುತ್ತೇವೆ. 24 ಗಂಟೆಯಲ್ಲಿ ಎಲ್ಲಾ ತೀರ್ಮಾನವಾಗುತ್ತದೆ'' ಎಂದು ತಿಳಿಸಿದರು.
ಇದಕ್ಕೂ ಮುನ್ನ ದೇವೇಗೌಡರ ನಿವಾಸಕ್ಕೆ ಮಾಜಿ ಶಾಸಕರಾದ ಶ್ರೀಕಂಠೇಗೌಡ ಮತ್ತು ಕೆ.ಅನ್ನದಾನಿ, ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ ಸೇರಿದಂತೆ ಹಲವರು ಆಗಮಿಸಿ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಹ ಗೌಡರ ನಿವಾಸಕ್ಕೆ ಆಗಮಿಸಿದ್ದು, ಮುಖಂಡರ ಜೊತೆ ಚರ್ಚಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ 14 ಕ್ಷೇತ್ರಗಳಿಗೆ 2ನೇ ಹಂತದ ಮತದಾನ, 227 ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರ - Lokasabha election 2024