ರಾಮನಗರ: ಜೆಡಿಎಸ್ - ಬಿಜೆಪಿ ಕಾರ್ಯಕರ್ತರು ಅದನ್ನು ಹಿಡಿದು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ. ಚುನಾವಣೆ ಆಯೋಗಕ್ಕೆ ನಾನು ಪ್ರಶ್ನೆ ಮಾಡ್ತೇನೆ. ರಾಜ್ಯದಲ್ಲಿ ಯಾವ ರೀತಿಯ ಚುನಾವಣೆ ನಡೆತ್ತಿದೆ. 3700 ಡ್ರೆಸ್ ಮೆಟಿರಿಯಲ್, ಸೀರೆಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ. 14 ಲಕ್ಷ ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದು ಎಲ್ಲಿಂದ ಬಂತು, ಯಾರಿಗೆ ಸೇರಿದ್ದು ಎಂದು ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಶಾಸಕರಿಂದ ಮತದಾರರಿಗೆ ಸೀರೆ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ರಾಮನಗರದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ, ’’ರಾಮನಗರದ ವಾರ್ಡ್ ನಂ.1ರ ಗೋಡೌನ್ ನಲ್ಲಿ ಸೀರೆ, ಡ್ರೆಸ್ಗಳು ಜಪ್ತಿ ಆಗಿವೆ. ಇದನ್ನು ಖರೀದಿ ಮಾಡಿರೋದು ಎನ್ ಎಂ ಗ್ರಾನೈಟ್ ಸಂಸ್ಥೆಯಾಗಿದೆ. ಈ ಎನ್ ಎಂ ಗ್ರಾನೈಟ್ ಸಂಸ್ಥೆ ಇದು ರಾಮನಗರ ಶಾಸಕರಿಗೆ ಸೇರಿದೆ. ಶಾಸಕ ಇಕ್ಬಾಲ್ ಹುಸೇನ್ ಎನ್ ಎಂ ಗ್ರಾನೈಟ್ ಮಾಲೀಕರು. ಅವರ ಕಂಪನಿ ಹೆಸರಿನಲ್ಲಿ ಬುಕ್ ಮಾಡಿರೋ ಸೀರೆಯಾಗಿದೆ‘‘ಎಂದು ಆರೋಪಿಸಿದರು.
ದಾಖಲೆ ಸಮೇತ ಪೋಟೊ ಬಿಡುಗಡೆ ಮಾಡಿದ ಅವರು, 15-20 ದಿನದಿಂದ ಕುಕ್ಕರ್,ಸೀರೆಗಳನ್ನು ಹಂಚಲಾಗುತ್ತಿದೆ. ಮಾಹಿತಿ ನೀಡಿದರೂ ಕೂಡ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಏನ್ಮಾಡ್ತಿದೆ.ಚುನಾವಣಾ ಆಯೋಗ ಪಾರದರ್ಶಕವಾಗಿ ಕೆಲಸ ಮಾಡ್ತಿದ್ಯಾ.? ಎಂದು ಜಿಲ್ಲಾಡಳಿತಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ರಾಜ್ಯ ಚುನಾವಣಾ ಆಯೋಗಕ್ಕೆ ನಾನು ಒತ್ತಾಯ ಮಾಡುತ್ತೇನೆ. ನೀವು ಪಾರದರ್ಶಕವಾಗಿ ಚುನಾವಣೆ ಮಾಡಿ. ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಕೆಲಸ ಆಗ್ತಿದೆ. ಚುನಾವಣೆ ಆಯೋಗಕ್ಕೆ ಇಂದು ನಾನು ದೂರು ನೀಡುತ್ತಿದ್ದೇನೆ. ರಾಜ್ಯದ ಜನತೆಗೆ ಪಾರದರ್ಶಕ ಚುನಾವಣೆ ನಡೆಯುತ್ತಾ ಎಂಬ ಸಂಶಯ ಬರುತ್ತಿದೆ. ಅಕ್ರಮವಾಗಿ ಹಣ ಲೂಟಿ ಮಾಡಿ ಚುನಾವಣೆ ಅಕ್ರಮ ಮಾಡ್ತಿದ್ದಾರೆ. ಬಿಜೆಪಿ - ಜೆಡಿಎಸ್ ಕಾರ್ಯಕರ್ತರ ಜೊತೆ ನಾನು ಸದಾ ಇರುತ್ತೇನೆ. ನಿಮ್ಮ ಹೋರಾಟಕ್ಕೆ ಯಾವ ಸಮಯದಲ್ಲೂ ನಾನು ಜೊತೆ ನಿಲ್ಲುತ್ತೇನೆ ಎಂದು ಹೇಳಿದರು.
ಇನ್ನು ಡಾ.ಮಂಜುನಾಥ್ ವೈದ್ಯಕೀಯ ಸೇವೆಯಲ್ಲಿ ಹೆಸರು ಮಾಡಿದ್ದಾರೆ. ಸಾಕಷ್ಟು ಬಡವರ ಪಾಲಿನ ದೇವರಾಗಿದ್ದಾರೆ. ಅಂತವರನ್ನು ಕಾಂಗ್ರೆಸ್ ಶಾಸಕರು ಟೀಕಿಸುತ್ತಿದ್ದಾರೆ. ಮಿಸ್ಟರ್ ಮಾಗಡಿ ಶಾಸಕರು ಡಾ.ಮಂಜುನಾಥ್ಗೆ ರಾಜಕೀಯ ತೆವಲು ಅಂದಿದ್ದಾರೆ. ತೆವಲು ಎನ್ನುವ ಪದದ ಅರ್ಥ ಗೊತ್ತಾ ನಿಮಗೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಮನಗರ ಶಾಸಕರ ಪದ ಬಳಕೆಯನ್ನು ನೋಡಿದ್ದೇನೆ. ನಿಮ್ಮ ಎಲ್ಲಾ ವಿಚಾರಗಳು ನನಗೆ ಗೊತ್ತು. ನೀವು ಎಲ್ಲೆಲ್ಲಿ ಹಣ ಇಟ್ಟಿದ್ದೀರಿ ಎಂಬುದು ಗೊತ್ತು. ನಾನು ಕೂಡಾ ಇದೇ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋತಿದ್ದೇನೆ. ನನ್ನ ಸೋಲಿಸಲು ನೀವು ಏನೇನು ಮಾಡಿದ್ರಿ ಎಲ್ಲಾ ಗೊತ್ತು. ಗಿಫ್ಟ್ ಕಾರ್ಡ್ ಕೊಟ್ಟು ಮತದಾರರನ್ನ ಯಾಮಾರಿಸಿದ್ದೀರಿ. ಮುಗ್ದ ಜನರಿಗೆ ಆಮಿಷ ತೋರಿಸಿ ಎಲೆಕ್ಷನ್ ಮಾಡಿದ್ದೀರಿ. ಈಗ ಸಂಕ್ರಾಂತಿ ಗಿಫ್ಟ್ ಅಂತ ಮಾರ್ಚ್ ತಿಂಗಳಲ್ಲಿ ಕುಕ್ಕರ್ ಹಂಚ್ತಿದ್ದೀರಿ. ಕೂಡಲೇ ಚುನಾವಣಾ ಆಯೋಗ ಈ ಬಗ್ಗೆ ಕ್ರಮ ವಹಿಸಬೇಕು. ನೀವು ಸರ್ಕಾರದ ಒತ್ತಡಕ್ಕೆ ಮಣಿದು ಕೆಲಸ ಮಾಡಬೇಡಿ. ನೀವು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಪಕ್ಷಾತೀತವಾಗಿ ಕೆಲಸ ಮಾಡಿ ಎಂದು ವಾಗ್ದಾಳಿ ನಡೆಸಿದರು.
ಇನ್ನು ಇಲ್ಲಿ ಕಾಂಗ್ರೆಸ್ ನಾಯಕರ ದಬ್ಬಾಳಿಕೆ ಹೆಚ್ಚಾಗ್ತಿದೆ. ನಮ್ಮ ಕಾರ್ಯಕರ್ತರು ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಕಾರ್ಯಕರ್ತರ ಕಾಂಗ್ರೆಸ್ ಸೇರಲಿಲ್ಲ ಅಂದ್ರೆ ಕೇಸ್ ಹಾಕ್ತೀವಿ, ಅಂತ ಹೆದರಿಸ್ತಿದ್ದೀರಿ. ನಿಮ್ಮ ದೌರ್ಜನ್ಯ, ದಬ್ಬಾಳಿಕೆ ಜಾಸ್ತಿ ದಿನ ನಡೆಯಲ್ಲ. ನಮ್ಮ ಅಧಿಕಾರವಧಿಯಲ್ಲಿ ನಾವು ಅಧಿಕಾರಿ ದುರುಪಯೋಗ ಮಾಡಿಕೊಂಡಿಲ್ಲ. ಒಬ್ಬ ಅಧಿಕಾರಿ, ಪೊಲೀಸರಿಗೆ ಪೋನ್ ಮಾಡಿ ಒತ್ತಡ ಹಾಕಿಲ್ಲ. ಹಾಗೇನಾದ್ರೂ ನಾನು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ರೆ ಇನ್ಮುಂದೆ ರಾಮನಗರಕ್ಕೆ ಕಾಲಿಡಲ್ಲ ಎಂದು ಹೇಳಿದರು.
ಈ ಕೂಡಲೇ ಚುನಾವಣಾಧಿಕಾರಿಗಳಿಗೆ ನಾವು ದೂರು ಕೊಡ್ತೇವೆ. ಬೆಂಗಳೂರಿನಲ್ಲಿ ನಾನು ದೂರು ಕೊಡುತ್ತೇನೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ಆಗಬೇಕು. ಸತ್ಯಾಸತ್ಯತೆ ಬೆಳಕಿಗೆ ಬರಬೇಕು ಎಂದು ನಿಖಿಲ್ ಒತ್ತಾಯಿಸಿದರು.
ಸೆಲ್ಫ್ ಸೂಸೈಡ್ ಗೊತ್ತಾಗುತ್ತೆ?: ಕುಮಾರ ಸ್ವಾಮಿ ಅವರಿಗೆ ಆಪರೇಷನ್ ಆಗುತ್ತಿದೆ. ಚನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾನು ಸಂಜೆ ಚೆನ್ನೈಗೆ ತೆರಳುತ್ತಿದ್ದೇನೆ. ಈ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಇನ್ನು ಜೆಡಿಎಸ್ ಸೆಲ್ಫ್ ಸೂಸೈಡ್ ಮಾಡಿಕೊಳ್ತಿದೆ ಎಂಬ ಡಿಕೆಶಿ ಹೇಳಿಕೆ ವಿಚಾರ ಮಾತನಾಡಿದ ಅವರು, ಅವರ ಹೇಳಿಕೆಯಲ್ಲಿ ಹತಾಶೆ ಎದ್ದು ಕಾಣುತ್ತಿದೆ. ಅವರ ಹೇಳಿಕೆಗಳನ್ನು ನಾನು ಗಮನಿಸಿದ್ದೇನೆ. ಅವರ ಹೇಳಿಕೆಗಳಿಗೆ ಜನ ಉತ್ತರ ಕೊಡುತ್ತಾರೆ. ಸೆಲ್ಫ್ ಸೂಸೈಡ್ ಯಾರು ಮಾಡಿಕೊಳ್ತಾರೆ ಗೊತ್ತಾಗುತ್ತದೆ ಎಂದು ಡಿಕೆಶಿಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ಕೊಟ್ಟರು.
ಪಕ್ಷದ ಸಂಘಟನೆಯಲ್ಲಿ ತೊಡಗುವೆ: ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತದೆ. ಪಕ್ಷದ ಕಾರ್ಯಕರ್ತರು ತಾಳ್ಮೆಯಿಂದ ಕಾದಿದ್ದಾರೆ. ಇವತ್ತು ಒಳ್ಳೆಯ ಗುಡ್ ನ್ಯೂಸ್ ಕೊಡುತ್ತೇವೆ. ಮಂಡ್ಯದ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಇದನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇವೆ.
ಮಂಡ್ಯದಲ್ಲಿಯೇ ಸಮರ್ಥ ಅಭ್ಯರ್ಥಿಗಳು ಕೂಡಾ ಇದ್ದಾರೆ. ಆದರೆ, ಕಾರ್ಯಕರ್ತರು ಕಳೆದ ಬಾರಿಯ ನಿಖಿಲ್ ಸೋಲಿನ ನೋವು ಹೋಗಿಲ್ಲ. ಹಾಗಾಗಿ ನಿಖಿಲ್ ಬರಲೇಬೇಕು ಅಂತ ಒತ್ತಾಯ ಮಾಡ್ತಿದ್ದಾರೆ. ಈ ಬಗ್ಗೆ ನಮ್ಮ ವರಿಷ್ಠರು ಅಂತಿಮವಾಗಿ ಇಂದು ತೀರ್ಮಾನ ಮಾಡ್ತಾರೆ.
ನಾನು ಒಬ್ಬ ಯುವ ಕಾರ್ಯಕರ್ತನಾಗಿ ಪಕ್ಷದ ಫಲಿತಾಂಶಕ್ಕೆ ಕೆಲಸ ಮಾಡ್ತೀನಿ. ಆದರ ಜೊತೆಗೆ ಕಾರ್ಯಕರ್ತರ ಅಭಿಪ್ರಾಯವನ್ನು ಗೌರವಿಸಬೇಕು. ನಾನು ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ರೆ ಉಳಿದ ಕ್ಷೇತ್ರಕ್ಕೆ ಹೆಚ್ಚು ಸಮಯ ಕೊಡಲು ಆಗಲ್ಲ. ಕೋಲಾರ, ಹಾಸನ, ಬೆಂಗಳೂರು ಗ್ರಾಮಾಂತರ ಎಲ್ಲ ಕಡೆಯೂ ನಾನು ಸಂಘಟನೆ ಮಾಡಬೇಕು. ಹಾಗಾಗಿ ನಾನು ಪಕ್ಷ ಬಲಿಷ್ಠ ಮಾಡುವ ಕೆಲಸ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಇದನ್ನೂಓದಿ:ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವ ಈಶ್ವರಪ್ಪ ಜತೆ ಸಂಧಾನಕ್ಕೆ ಮುಂದಾಗಲ್ಲ: ಬಿ ಎಸ್ ಯಡಿಯೂರಪ್ಪ