ಹುಬ್ಬಳ್ಳಿ: "ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಹೋಳಿ ಹಬ್ಬದ ನಿಮಿತ್ತ ಹುಬ್ಬಳ್ಳಿ ಜಗ್ಗಲಗಿ ಹಬ್ಬವನ್ನು ಮಾ.28ರಂದು ಮಧ್ಯಾಹ್ನ 3ಕ್ಕೆ ನಗರದ ಮೂರುಸಾವಿರ ಮಠದ ಮೈದಾನದಲ್ಲಿ ಆಯೋಜಿಸಲಾಗಿದೆ" ಎಂದು ಶಾಸಕ ಹಾಗೂ ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಆಯೋಜಕ ಮಹೇಶ್ ಟೆಂಗಿನಕಾಯಿ ಹಾಗೂ ಮೂಜಗು ಸ್ವಾಮೀಜಿ ಮಾಹಿತಿ ನೀಡಿದರು.
ನಗರದ ಮೂರುಸಾವಿರ ಮಠದ ಆವರಣದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಅಂದಿನ ಕಾರ್ಯಕ್ರಮದ ಸಾನಿಧ್ಯವನ್ನು ಮೂರುಸಾವಿರ ಮಠದ ಡಾ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮೀಜಿ ವಹಿಸಲಿದ್ದಾರೆ. ಇವರ ಜತೆಗೆ ನಾಡಿನ ವಿವಿಧ ಮಠಾಧೀಶರು, ಗಣ್ಯಮಾನ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ" ಎಂದರು.
"ಕಳೆದ 11 ವರ್ಷಗಳಿಂದ ವಿವಿಧ ಗ್ರಾಮಗಳ ಹಾಗೂ ಹುಬ್ಬಳ್ಳಿ ನಗರದ ವಿವಿಧ ಪ್ರದೇಶಗಳ ಜಗ್ಗಲಗಿ ತಂಡಗಳ ಸಹಾಯ, ಸಹಕಾರದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜಗ್ಗಲಗಿ ಹಬ್ಬ ಆಚರಿಸುತ್ತಾ ಬರಲಾಗಿದೆ. ಅದರಂತೆ ಈ ವರ್ಷವೂ ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಅಂದು ನೂರಾರು ಜಗ್ಗಲಗಿ, ವಿವಿಧ ಚರ್ಮವಾದ್ಯಗಳ ಇಂಪಾದ ನಾದದೊಂದಿಗೆ, ಜಾನಪದ ಕಲಾವಿದರ ಸಾರಥ್ಯದಲ್ಲಿ ಮೂರುಸಾವಿರ ಮಠದ ಮೈದಾನದಿಂದ ಮೆರವಣಿಗೆ ಆರಂಭಗೊಳ್ಳಲಿದೆ. ನಂತರ ವಿಕ್ಟೋರಿಯಾ ರಸ್ತೆ, ಕೊಪ್ಪಿಕರ ರಸ್ತೆ, ಬ್ರಾಡ್ ವೇ, ದುರ್ಗಲ ಬಯಲು ವೃತ್ತ, ರಾಧಾಕೃಷ್ಣ ಗಲ್ಲಿ, ಬಾರದಾನ ಸಾಲ, ಜವಳಿ ಸಾಲ, ಬೆಳಗಾಂವ್ ಗಲ್ಲಿ, ಪೆಂಡಾರ್ ಗಲ್ಲಿ, ಶ್ರೀ ತುಳಜಾಭವಾನಿ ವೃತ್ತ, ದಾಜಿಬಾನಪೇಟ ಮಾರ್ಗವಾಗಿ ಪುನಃ ಮೂರುಸಾವಿರ ಮಠವನ್ನು ತಲುಪಲಿದೆ" ಎಂದು ತಿಳಿಸಿದರು.
"ಹಬ್ಬದಲ್ಲಿ ಸುಳ್ಳ, ಬ್ಯಾಹಟ್ಟಿ, ಛಬ್ಬಿ, ಸೂರಶೆಟ್ಟಿಕೊಪ್ಪ, ಧಾರವಾಡ, ಅರಳಿಕಟ್ಟಿ, ಅಮರಗೋಳ, ತಾರಿಹಾಳ, ಶಿವಳ್ಳಿ, ಕಲಘಟಗಿ, ಗುಂಡೇನಟ್ಟಿ, ಮರೆವಾಡ, ಬೊಮ್ಮಸಮುದ್ರ, ಅಮ್ಮಿನಬಾವಿ, ಸೋಮನಕೊಪ್ಪ, ಗಂಗಾವತಿ, ಕಣವಿಹೊನ್ನಾಪುರ, ಹಂಚಿನಾಳ ಸೇರಿದಂತೆ ಇನ್ನಿತರ ಹಳ್ಳಿಗಳಿಂದ ಒಟ್ಟು 400 ತಂಡಗಳು ಭಾಗವಹಿಸಲಿವೆ" ಎಂದು ಮಾಹಿತಿ ನೀಡಿದರು.
"ಸಂಸ್ಕೃತಿ ಇಲಾಖೆಯ ಸಚಿವರಿಗೆ ಸಂಸ್ಕೃತಿಯೇ ಇಲ್ಲ": "ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಸರಿಯಾದ ರೀತಿಯಲ್ಲಿ ಮಾತನಾಡಬೇಕು. ಆಕಾಶಕ್ಕೆ ಉಗುಳಿದರೆ ನಮ್ಮ ಮೇಲೆಯೇ ಸಿಡಿಯುತ್ತದೆ" ಎಂದು ಮಹೇಶ್ ಟೆಂಗಿನಕಾಯಿ ಅವರು ಸಚಿವ ಶಿವರಾಜ ತಂಗಡಗಿ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, "ದೇಶದ ಬಹುದೊಡ್ಡ ನಾಯಕರ ಬಗ್ಗೆ ಹಾಗೂ ಗೌರವಾನ್ವಿತ ಪ್ರಧಾನಮಂತ್ರಿಗಳ ಬಗ್ಗೆ ಸಚಿವರು ಈ ರೀತಿ ಮಾತನಾಡುವುದು ಸರಿಯಲ್ಲ. ನಾಲಿಗೆ ಮೇಲೆ ಹಿಡಿತವಿರಬೇಕು. ಅವರು ಒಂದು ಸಮಾಜ ಹಾಗೂ ಸಮುದಾಯಕ್ಕೆ ಸೀಮಿತವಾದ ಪ್ರಧಾನಮಂತ್ರಿ ಅಲ್ಲ. ಅವರು ದೇಶದ ಪ್ರಧಾನಮಂತ್ರಿ. ಈ ನಿಟ್ಟಿನಲ್ಲಿ ಮಾತನಾಡುವಾಗ ಸಂಸ್ಕೃತಿ ಬಿಂಬಿಸುವ ರೀತಿಯಲ್ಲಿ ಮಾತನಾಡಬೇಕು" ಎಂದರು.
ಕಾಂಗ್ರೆಸ್ ಆಂತರಿಕ ಅಸಮಾಧಾನದ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಚುನಾವಣೆ ನಂತರ ಬಹುದೊಡ್ಡ ಆಘಾತ ಕಾಂಗ್ರೆಸ್ ಸರ್ಕಾರಕ್ಕೆ ಕಾದಿದೆ. ಚುನಾವಣೆಗೆ ಮುನ್ನವೇ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಸಮಾಧಾನ ಭುಗಿಲೆದ್ದಿದ್ದು, ಚುನಾವಣೆ ನಂತರವೇ ಸರ್ಕಾರಕ್ಕೆ ಬಹುದೊಡ್ಡ ಆಘಾತ ಕಾದಿದೆ" ಎಂದು ಹೇಳಿದರು.
ಇದನ್ನೂ ಓದಿ: ಸಚಿವ ತಂಗಡಗಿ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ, ಮನೆಗೆ ಮುತ್ತಿಗೆ ಯತ್ನ - BJP Protest Against Tangadagi