ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಂತ್ರಸ್ತೆಯರಿಗೆ ಬೆದರಿಸಿ ದೂರು ಕೊಡಿಸಲಾಗುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಗೃಹ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಸಂತ್ರಸ್ತೆಯರನ್ನು ಬೆದರಿಸಿ ದೂರು ಕೊಡಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಯಾರು ಬೆದರಿಕೆ ಹಾಕ್ತಿದ್ದಾರೋ ಗೊತ್ತಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗ ಎಸ್ಐಟಿ ಅಧಿಕಾರಿಗಳ ಜೊತೆ ಮಾತಾಡಲಿ. ಏನು ಬೆದರಿಕೆ ಬಂದಿದೆ ಅಂತ ತಿಳಿಸಲಿ. ಎಸ್ಐಟಿ ಏನು ಕ್ರಮ ತೆಗೆದುಕೊಳ್ಳಬೇಕೋ, ತೆಗೆದುಕೊಳ್ಳುತ್ತದೆ ಎಂದರು.
ಕಾಂಗ್ರೆಸ್ ಒಕ್ಕಲಿಗ ನಾಯಕರ ವಿರುದ್ಧ ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅದಕ್ಕೆ ಉತ್ತರ ಕೊಡೋದಕ್ಕೆ ಆಗಲ್ಲ ಎಂದರು. ಬಿಜೆಪಿ ಮುಖಂಡ ದೇವರಾಜೇಗೌಡ ವಿರುದ್ದ ದೂರು ಸಲ್ಲಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲವನ್ನೂ ಮಾಡ್ತಿದ್ದಾರೆ. ಎಸ್ಐಟಿ ತನಿಖೆ ಮಾಡ್ತಿರೋದೆಲ್ಲವನ್ನೂ ಹೇಳಲ್ಲ. ಕಾನೂನಿನ ಪ್ರಕಾರ ಅವರು ಸಾಗುತ್ತಿದ್ದಾರೆ. ಏನೆಲ್ಲಾ ದೂರು ಬರುತ್ತೆ ಅದನ್ನು ಕಾನೂನಿನ ಪ್ರಕಾರ ಮಾಡ್ತಾರೆ. ವಿಡಿಯೋ ವೈರಲ್, ದೂರು, ಸ್ಟೇಟ್ಮೆಂಟ್ ವಿಚಾರ ಸೇರಿದಂತೆ ಎಲ್ಲವನ್ನು ನೋಡಿಕೊಳ್ಳುತ್ತಾರೆ, ಗಮನಿಸುತ್ತಿದ್ದಾರೆ. ಪ್ರಕರಣ ಸಂಬಂಧ ಎಲ್ಲವನ್ದೂನು ಎಸ್ಐಟಿ ಅಧಿಕಾರಿಗಳು ಗಮನಿಸುತ್ತಾರೆ ಎಂದು ತಿಳಿಸಿದರು.