ಬೆಂಗಳೂರು : ಪತ್ನಿ ಮಾನಸಿಕ ಅಸ್ವಸ್ಥೆ ಎಂಬುದಾಗಿ ಬಿಂಬಿಸಲು ಮುಂದಾಗಿದ್ದ ಪತಿಯಿಂದ ಹೆಂಡತಿಗೆ 50 ಸಾವಿರ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿದೆ. ಪತ್ನಿ ಮಾನಸಿಕ ಅಸ್ವಸ್ಥೆಯಾಗಿದ್ದು, ಆಕೆಗೆ ನಗರದ ನಿಮಾನ್ಸ್‌ನ ಮನೋವೈದ್ಯರಿಂದ ಚಿಕಿತ್ಸೆಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಪತಿಯಾದವರು ವಿಚ್ಛೇದನಕ್ಕಾಗಿ ಪತ್ನಿಯ ಮಾನಸಿಕ ಅಸ್ವಸ್ಥತೆ ಕಾರಣ ನೀಡುವುದು ದುರದೃಷ್ಟಕರ. ಅಲ್ಲದೇ, ಆಕೆಯ ಜ್ಞಾನಕ್ಕೆ 11 ವರ್ಷ ಮತ್ತು 8 ತಿಂಗಳು ಎಂದು ಬಿಂಬಿಸಲು ಪ್ರಯತ್ನಿಸಲು ಮುಂದಾಗಿದ್ದಾರೆ. ಜತೆಗೆ, ಪತ್ನಿಗೆ ಮಾನಸಿಕವಾಗಿ 18 ವರ್ಷ ಮಾತ್ರ ವಯಸ್ಸಾಗಿದ್ದು, ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿರುವ ವಾದವನ್ನು ಒಪ್ಪಲಾಗದು ಎಂದು ಪೀಠ ಹೇಳಿದೆ. ಜತೆಗೆ, ಕೌಟುಂಬಿಕ ನ್ಯಾಯಾಲಯದಲ್ಲಿನ ಮೂಲ ಅರ್ಜಿ ಕ್ರೌರ್ಯದ ಆರೋಪದ ಮೂಲಕ ಸಲ್ಲಿಸಿದ್ದಾರೆ. ಆದರೆ, ಪತ್ನಿಯ ಮಾನಸಿಕ ಸ್ಥಿತಿಯನ್ನು ಉಲ್ಲೇಖಿಸಿಲ್ಲ ಎಂದು ಪೀಠ ತಿಳಿಸಿದೆ.
ಅಲ್ಲದೇ, ಕೌಟುಂಬಿಕ ನ್ಯಾಯಾಲಯಗಳು ಒಬ್ಬ ವ್ಯಕ್ತಿಗೆ ಚಿಕಿತ್ಸೆಗೆ ಸೂಚನೆ ನೀಡಬಹುದು. ಆದರೆ, ಅಂತಹ ಅರ್ಜಿ ಬಂದ ತಕ್ಷಣ ಆದೇಶ ನೀಡುವುದಕ್ಕೆ ಅವಕಾಶವಿಲ್ಲ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ : ಬೆಂಗಳೂರು ನಗರದ ನಿವಾಸಿಗಳಾಗಿದ್ದ ದಂಪತಿ 2020ರ ನವೆಂಬರ್ ತಿಂಗಳಲ್ಲಿ ವಿವಾಹವಾಗಿದ್ದರು. ದಂಪತಿಯ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಮದುವೆಯಾದ ಮೂರು ತಿಂಗಳಲ್ಲಿ ಪತ್ನಿ ತವರು ಮನೆ ಸೇರಿದ್ದರು. ಜತೆಗೆ, ಪತ್ನಿ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಲ್ಲಿ 2022ರ ಜೂನ್ ತಿಂಗಳಲ್ಲಿ ಪತಿಯ ವಿರುದ್ಧ ಕೆ. ಪಿ ಅಗ್ರಹಾರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಈ ನಡುವೆ ಪತ್ನಿಯಿಂದ ಮಾನಸಿಕ ಹಿಂಸೆ ಅನುಭವಿಸುತ್ತಿರುವುದಾಗಿ ಆರೋಪಿಸಿ ವಿಚ್ಛೇದನ ಕೋರಿ ಪತಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಜತೆಗೆ, 2023 ರ ಮಾರ್ಚ್ 15 ರಂದು ಮಧ್ಯಂತರ ಅರ್ಜಿ ಸಲ್ಲಿಸಿ ಪತ್ನಿಯ ಮಾನಸಿಕ ಸ್ಥಿತಿ ಸರಿಯಿಲ್ಲದ ಕಾರಣ ನಿಮಾನ್ಸ್ ಆಸ್ಪತ್ರೆಯ ಮನೋವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಲು ನಿರ್ದೇಶನ ನೀಡುವಂತೆ ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಪತ್ನಿಯ ಮಾನಸಿಕ ಸಾಮರ್ಥ್ಯದ ಕುರಿತ ದಾಖಲೆಗಳನ್ನು ಪರಿಶೀಲಿಸಿ, ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಪತಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪತ್ನಿಯ ಮಾನಸಿಕ ಸ್ಥಿತಿಗತಿ ಸರಿಯಿಲ್ಲ ಎಂಬುದಕ್ಕೆ ದಾಖಲೆಗಳಿವೆ. ವಿಕ್ಟೋರಿಯಾ ಆಸ್ಪತ್ರೆಗೆ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದ ಸಂದರ್ಭದಲ್ಲಿ ಪತ್ನಿಯನ್ನು ಪರೀಕ್ಷಿಸಿರುವ ವೈದ್ಯರು ಅರ್ಜಿದಾರರ ಪತ್ನಿಗೆ ಮಾನಸಿಕ ವಯಸ್ಸು 11 ವರ್ಷ 8 ತಿಂಗಳು ಎಂದು ತಿಳಿಸಿದ್ದರು. ಇದೇ ಕಾರಣದಿಂದ ವಿಚ್ಛೇದನ ಮಂಜೂರು ಮಾಡಬಹುದು ಎಂದು ತಿಳಿಸಿದ್ದರು.
ಇದಕ್ಕೆ ಪ್ರತಿಯಾಗಿ ಪತ್ನಿಯ ಪರ ವಕೀಲರು, ಹಲವು ದಾಖಲೆಗಳನ್ನು ಸಲ್ಲಿಸಿ, ನಮ್ಮ ಕಕ್ಷಿದಾರರು ಗಾಯಕಿಯಾಗಿದ್ದಾರೆ. ಜತೆಗೆ, ಶಿಕ್ಷಕಿಯಾಗಿದ್ದು ಹಲವು ತಾಂತ್ರಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವುದಾಗಿ ನ್ಯಾಯಪೀಠಕ್ಕೆ ವಿವರಿಸಿದ್ದರು.
ಇದನ್ನೂ ಓದಿ : ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣ: ಕಾನ್ಸ್ಟೇಬಲ್ಗೆ ಮಂಜೂರಾಗಿದ್ದ ಜಾಮೀನು ರದ್ದು