ಬೆಂಗಳೂರು: ಮಹಿಳೆಯನ್ನು ಹತ್ಯೆಮಾಡಿ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿ ಇಟ್ಟು ವಾಸನೆ ಬಾರದಂತೆ ರಾಸಾಯನಿಕ ಸಿಂಪಡಿಸಿದ ಆರೋಪಿ ಪರಾರಿಯಾದ ಆಘಾತಕಾರಿ ಘಟನೆ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯ ಮುನೇಶ್ವರ ನಗರದಲ್ಲಿ ನಡೆದಿದೆ. ನೇಪಾಳ ಮೂಲದ ಮಹಾಲಕ್ಷ್ಮೀ (29) ಬರ್ಬರವಾಗಿ ಹತ್ಯೆಯಾದ ಮಹಿಳೆ.
ಮೃತ ಮಹಿಳೆಯು ವಿವಾಹಿತೆಯಾಗಿದ್ದು, ವೈಯಕ್ತಿಕ ಕಾರಣಕ್ಕಾಗಿ ಪತಿ ಹುಕುಂ ಸಿಂಗ್ ರಾಣಾ ಹಾಗೂ ಮಗುವನ್ನು ತೊರೆದು ಮುನೇಶ್ವರನಗರದಲ್ಲಿ ವಾಸವಿದ್ದರು. ಪತಿ ಹಾಗೂ ಮಗು ನೆಲಮಂಗಲದಲ್ಲಿ ನೆಲೆಸಿದ್ದರು. ಮಹಿಳೆಯು ಕಳೆದ ಐದು ತಿಂಗಳುಗಳಿಂದ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಮಹಿಳೆಯ ಫೋನ್ ಸ್ವಿಚ್ಡ್ ಆಫ್ ಆಗಿದ್ದರಿಂದ ಅನುಮಾನಗೊಂಡ ಆಕೆ ತಾಯಿ ಹಾಗೂ ಕುಟುಂಬಸ್ಥರು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಕೆಲ ದಿನ ಹಿಂದೆಯೇ ಮಹಿಳೆಯನ್ನು ಕೊಲೆ ಮಾಡಿರುವ ಆರೋಪಿ ಮೃತದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟು ದುರ್ವಾಸನೆ ಬಾರದಂತೆ ಕೆಮಿಕಲ್ ಸಿಂಪಡಿಸಿ ಮನೆಗೆ ಲಾಕ್ ಹಾಕಿ ಪರಾರಿಯಾಗಿದ್ದ. ಕೊಲೆಯಾದ ಮಹಿಳೆಯ ಫೋನ್ ಸೆ.2ರಂದು ಸ್ವಿಚ್ಡ್ ಆಫ್ ಆಗಿತ್ತು. ಅಂದೇ ಹತ್ಯೆಯಾಗಿರಬಹುದು ಎಂಬ ವಿಚಾರ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ.
ಇದನ್ನೂ ಓದಿ: ಬೆಂಗಳೂರು: ಯುವತಿಗಾಗಿ ಸ್ನೇಹಿತರ ನಡುವೆ ಶುರುವಾದ ಗಲಾಟೆ ಹತ್ಯೆಯಲ್ಲಿ ಅಂತ್ಯ! - Young Man Murder