ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಬಗ್ಗೆ ನಿನ್ನೆ ಮತ್ತು ಮೊನ್ನೆ ಒಳ್ಳೆಯ ಲೀಡ್ ಸಿಕ್ಕಿದೆ. ಪೊಲೀಸರು ಆದಷ್ಟು ಶೀಘ್ರವಾಗಿ ಆರೋಪಿಯನ್ನು ಹಿಡಿಯುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಪರಮೇಶ್ವರ್ ಅವರು, ಹಲವರನ್ನು ಕರೆದು ತನಿಖೆ ನಡೆಸಲಾಗಿದೆ. ಪ್ರಕರಣ ಸಂಬಂಧ ಬಂಧನ ಅಂತ ಯಾವುದೂ ಆಗಿಲ್ಲ. ಕೆಲವರು ಬಂಧನ ಅಂತ ತಿಳಿದುಕೊಂಡಿದ್ದಾರೆ. ಇನ್ನೂ ಕೆಲವರು ತನಿಖೆ ಅಂತ ಅಂದುಕೊಂಡಿದ್ದಾರೆ. ಸಿಎಂ ಕೂಡ ಬಂಧನ ಅಂದು ಬಿಟ್ಟರು, ಆದರೆ ಬಂಧನ ಎಂದಲ್ಲ. ತನಿಖೆ ನಡೆಸುತ್ತಿದ್ದಾರೆ, ತನಿಖೆ ಮುಂದುವರಿಯುತ್ತದೆ ಎಂದರು.
ಶಂಕಿತ ಆರೋಪಿಯ ಬಗ್ಗೆ ಇನ್ನೂ ಕೆಲವು ಮಹತ್ವದ ಲೀಡ್ಸ್ ಸಿಕ್ಕಿದೆ. ಯಾವ ಕಡೆ ಹೋಗಿದ್ದಾನೆ ಹಾಗೂ ಬಟ್ಟೆ ಬದಲಾಯಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಸ್ನಲ್ಲಿ ಪ್ರಯಾಣ ಮಾಡಿರುವುದು ಗೊತ್ತಾಗಿದೆ. ಬೆಂಗಳೂರಿನಲ್ಲಿಯೇ ಇದ್ದಾನಾ ಅಥವಾ ಬೇರೆ ಕಡೆ ಹೋಗಿದ್ದಾನಾ? ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಆ್ಯಸಿಡ್ ನಿಷೇಧ ವಿಚಾರ: ಮುಂದುವರೆದು, ರಾಜ್ಯದಲ್ಲಿ ಆ್ಯಸಿಡ್ ನಿಷೇಧ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಎರಡು ದಿನದಲ್ಲಿ ಡಿಜಿ ಅವರು ಸರ್ಕಾರ ಹಾಗೂ ಇಲಾಖೆಗೆ ಪತ್ರ ಬರೆಯುತ್ತಾರೆ. ಯಾರು ಬೇಕಾದರೂ ಆ್ಯಸಿಡ್ ಖರೀದಿಸುವಂತಿಲ್ಲ. ಕೆಮಿಕಲ್ ಇಂಡಸ್ಟ್ರಿ ಅವರಿಗೆ ಮಾತ್ರ ಅನುಮತಿ ಸಿಗಬೇಕು. ಉಳಿದಂತೆ ನಿಷೇಧ ಮಾಡಬೇಕು ಅಂತ ಪತ್ರ ಬರೆಯುತ್ತೇವೆ ಎಂದರು.
ಕಾಂಗ್ರೆಸ್ ಚುನಾವಣೆ ಸಮಿತಿ ಸಭೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ನಮ್ಮಲ್ಲಿ ಎರಡು ಸಭೆ ಆಗಿದೆ. ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಜೊತೆ ಹಾಗೂ ಸ್ಕ್ರೀನಿಂಗ್ ಕಮಿಟಿಯ ಸಭೆ ಆಗಿದೆ. ಇಂದು ಅಥವಾ ನಾಳೆ ಅಂತಿಮಗೊಳಿಸುತ್ತಾರೆ. ಮಾಹಿತಿಯು ದೆಹಲಿಯಲ್ಲಿ ಸೆಂಟ್ರಲ್ ಇಲೆಕ್ಷನ್ ಕಮಿಟಿಗೆ ಹೋಗಲಿದೆ. ಸಿಇಸಿಯಲ್ಲಿ ಎಐಸಿಸಿ ಅಧ್ಯಕ್ಷರು ಸೇರಿ ಒಟ್ಟು 16 ಜನ ಇದ್ದಾರೆ. ನಮ್ಮ ರಾಜ್ಯದಿಂದ ಜಾರ್ಜ್ ಅವರು ಇದ್ದಾರೆ. ಖರ್ಗೆ ಅಧ್ಯಕ್ಷರು ಆಗಿರುವುದರಿಂದ ಸುಲಭ. ಒಂದೇ ಪಟ್ಟಿಯಲ್ಲಿ ಎಲ್ಲಾ ಬಿಡುಗಡೆ ಅಂತ ಹೇಳುತ್ತಿದ್ದರು. ಬೇರೆ ಪಕ್ಷದಿಂದ ಬರುವವರೂ ಇದ್ದಾರೆ. ಹೀಗಾಗಿ ಸ್ವಲ್ಪ ತಡ ಮಾಡಬಹುದು. ಎರಡನೇ ಪಟ್ಟಿಯನ್ನೂ ಬಿಡುಗಡೆ ಮಾಡಬಹುದು ಎಂದರು.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಬಳಿಕ ಬಳ್ಳಾರಿಗೆ ಆರೋಪಿ ತೆರಳಿರುವ ಶಂಕೆ: ಎನ್ಐಎಯಿಂದ ಪರಿಶೀಲನೆ