ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳು ಬಿಜೆಪಿ ಹೈಕಮಾಂಡ್, ರಾಷ್ಟ್ರೀಯ ನಾಯಕರ ಗಮನಕ್ಕೆ ಬಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ನಗರದಲ್ಲಿ ಬುಧವಾರ ಗಾಂಧಿ ಜಯಂತಿ ಪ್ರಯುಕ್ತ ಬಳೇಪೇಟೆಯ ನಿಮಿಷಾಂಭ ದೇವಸ್ಥಾನದಲ್ಲಿ ಮತ್ತು ಸುತ್ತ-ಮುತ್ತ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯತ್ನಾಳ್ ಅವರು ಪಕ್ಷದ ನೀತಿ ನಿರೂಪಣೆಗೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಪಕ್ಷದ ವೇದಿಕೆಯಲ್ಲೇ ಎಲ್ಲವನ್ನೂ ಚರ್ಚಿಸಬೇಕು. ಯಾರೂ ಬಹಿರಂಗ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
’ನಿಮ್ಮ ಬಗ್ಗೆ ಕೋರ್ಟ್ ಏನು ಹೇಳಿದೆ ಎಂಬುದನ್ನು ನೋಡಿ’: ನಾನು ಡಿನೋಟಿಫೈ ಮಾಡಿದ್ದೇನಾ? ನಾನು ತಪ್ಪೇನು ಮಾಡಿದ್ದೇನೆ? ನಾನು ಸೈನ್ ಮಾಡಿದ್ದೇನಾ ಎಂದು ಸಿದ್ದರಾಮಯ್ಯನವರು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯನವರೇ, ನೀವು ದಯವಿಟ್ಟು ಒಂದು ಸಂಗತಿ ಅರ್ಥ ಮಾಡಿಕೊಳ್ಳಲಿ. ನಿಮ್ಮ ಬಗ್ಗೆ ಕೋರ್ಟ್ ಏನು ಹೇಳಿದೆ ಎಂಬುದನ್ನು ನೋಡಿ ಎಂದು ತಿಳಿಸಿದರು.
2004ರಿಂದ ಈಚೆಗೆ ನೀವು ಸತತವಾಗಿ ಒಂದಲ್ಲ ಒಂದು ಸ್ಥಾನದಲ್ಲಿ ಇರಲಿಲ್ಲ ಎಂದಾದರೆ, ಇದು ಇನ್ಯಾರಿಗೂ ಸಾಮಾನ್ಯ ಮನುಷ್ಯನಿಗೆ ಮುಟ್ಟಲು ಸಾಧ್ಯವೇ ಇಲ್ಲ. ಇದು ಮುಖ್ಯಮಂತ್ರಿಯ ಪತ್ನಿಗೆ ಮುಖ್ಯಮಂತ್ರಿಗೆ ಗೊತ್ತಾಗದೇ ಆಗಲು ಸಾಧ್ಯ ಇಲ್ಲ. ಈ ರೀತಿ ಕೋರ್ಟ್ ತೀವ್ರವಾಗಿ ಹೇಳಿದೆ ಎಂದರು.
ಮುಡಾದಿಂದ ಡಿನೋಟಿಫಿಕೇಶನ್, ಜಾಗ ಟ್ರಾನ್ಸ್ಫರ್ ಆದದ್ದು, ಅವುಗಳ ಮೌಲ್ಯ 62 ಕೋಟಿ ಎಂದದ್ದು, ಯಾವುದೋ ಜಾಗಕ್ಕೆ ಪರಿಹಾರವಾಗಿ 14 ನಿವೇಶನ ಕೊಟ್ಟದ್ದನ್ನು ವಿಜಯೇಂದ್ರ ಆಗಿಯಾಗಿ ಮೊದಲಿನಿಂದಲೇ ಹೇಳುತ್ತಿದ್ದೇವೆ. ರಾಜ್ಯಪಾಲರ ಸ್ಯಾಂಕ್ಷನ್ ಬಳಿಕ ನೀವು ಏನೇನು ಕರಾಮತ್ತು ಮಾಡಿದ್ದೀರೆಂದು ಕೋರ್ಟ್ ಎಲ್ಲವನ್ನೂ ಸ್ಪಷ್ಟವಾಗಿ ದಾಖಲಿಸಿದೆ. ನೀವು ಬಾಬಾಸಾಹೇಬ ಡಾ. ಅಂಬೇಡ್ಕರರಿಗೆ ಅಪಮಾನ ಮಾಡಿದವರು. ಅವರನ್ನು ಎರಡೆರಡು ಬಾರಿ ಸೋಲಿಸಿದವರು. ಸಂವಿಧಾನಕ್ಕೆ ಗೌರವ ಕೊಡದ ನೀವು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಸಂವಿಧಾನದ ಪ್ರತಿ ಹಿಡಿದು ಓಡಾಡಿದ್ದೀರಿ ಎಂದು ಟೀಕಿಸಿದರು.
ಮುಡಾ ವಿಚಾರದಲ್ಲಿ ಮುಖ್ಯಮಂತ್ರಿಯ ಪಾತ್ರವನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದರೂ ನೀವು ರಾಜೀನಾಮೆ ಕೊಡದಿದ್ದರೆ ಭಂಡತನ ಪ್ರದರ್ಶನ ಮಾಡಿದಂತೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಮತ್ತು ರಾಬರ್ಟ್ ವಾಧ್ರಾ ಆರ್ಥಿಕ ಅಪರಾಧದಲ್ಲಿ ಜಾಮೀನಿನಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಲೋ ಕಮಾಂಡ್ ಆಗಿದೆ ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದರು.
ಇದನ್ನೂ ಓದಿ: ಕೇಂದ್ರ ಸರ್ಕಾರ ಬಳಸಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ - CM Allegations